ಕಳಸದ ಬಸದಿಯಲ್ಲಿ ಪತ್ತೆಯಾದ ಜೈನ ಶಾಸನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.11.ಪ್ರೊ. ಟಿ. ಮುರುಗೇಶಿ. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗ. ಎಂ.ಎಸ್.ಆರ್.ಎಸ್. ಕಾಲೇಜು, ಶಿರ್ವ-574116, ಉಡುಪಿ.

ಚಿಕ್ಕಮಗಳೂರು ಜಿಲ್ಲೆ ಕಳಸದ ಚಂದ್ರನಾಥ ತೀರ್ಥಂಕರರ ಬಸದಿಯಲ್ಲಿನ ಒಂದು ಚಿಕ್ಕ ಚಂದ್ರನಾಥ ತೀರ್ಥಂಕರರ ಪ್ರತಿಮೆಯ ಹಿಂಭಾಗದಲ್ಲಿ ಜೈನ ಶಾಸನವೊಂದು ಪತ್ತೆಯಾಗಿದೆ. ಈ ಪುಟ್ಟ ಶಾಸನದಲ್ಲಿ ಪ್ರತಿ ಸಾಲನ್ನು ಒಂದು ಸೊನ್ನೆಯಿಂದ ಆರಂಭಿಸಲಾಗಿದೆ. ಕನ್ನಡ ಲಿಪಿ ಮತ್ತು ಭಾಷೆಯ 10 ಸಾಲಿನ ಶಾಸನದಲ್ಲಿ ಕಿವಿಯಲಿ ಕೇಳಿ, ಕಂಣಲಿ ನೋಡಿದ ಪಾಪಕೆ ಪ್ರಾಯಶ್ಚಿತ್ತವಾಗಿ ಪ್ರತಿ ಚಂದ್ರನಾಥನ ಅಂದರೆ, ಮೂಲ ಚಂದ್ರನಾಥ ವಿಗ್ರಹದ ಪ್ರತಿರೂಪದ ಚಿಕ್ಕ ಪ್ರತಿಮೆಯನ್ನು ಮಾಡಿಸಲಾಯಿತು ಎಂದು ಈ ಶಾಸನದಲ್ಲಿ ಹೇಳಲಾಗಿದೆ.


ಶಾಸನದ ಆರಂಭದಲ್ಲಿಯೇ, ಅಂಗೀರಸ ಸಂವತ್ಸರ, ಆಷಾಢ ಶುದ್ಧ ದಶಮಿ ಮೂರು ಎಂದು ಕಾಲವನ್ನು ಉಲ್ಲೇಖಿಸಲಾಗಿದೆ. ಇದು, ಕ್ರಿ.ಶ. 1512 ಜುಲೈ 2 ಶುಕ್ರವಾರಕ್ಕೆ ಸರಿಹೊಂದುತ್ತದೆ. ಶಾಸನದಲ್ಲಿ ಕಳಸದ ದೇವಚಂದ್ರ ಜೈನ ಮುನಿಗಳನ್ನು ಹೆಸರಿಸಲಾಗಿದೆ. ಇದೇ ಬಸದಿಯ ಪ್ರಧಾನ ಅಧಿದೇವತೆಯಾದ ಚಂದ್ರನಾಥ ವಿಗ್ರಹದ ಎರಡೂ ಪಾಶ್ರ್ವಗಳಲ್ಲಿ ಬರೆದ ಶಾಸನದಲ್ಲಿ ಮೂಲಸಂಘ, ಪನಸೋಗೆ ಬಳಿ, ದೇಶೀಯ ಗಣ, ಪುಸ್ತಕ ಗಚ್ಚ, ಕುಂದಕುಂದಾನ್ವಯ ಲಲಿತಕೀರ್ತಿ ದೇವರ ಶಿಷ್ಯರಾಗಿದ್ದ ದೇವಚಂದ್ರ ದೇವರು ಈ ವಿಗ್ರಹವನ್ನು ಪ್ರತಿಷ್ಠಾಪಿಸಿದ ವಿಷಯವನ್ನು ಹೇಳಲಾಗಿದೆ.

ಶಾಸನೋಕ್ತ ಪನಸೋಗೆ ಗ್ರಾಮವು ಈಗಿನ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಅತ್ಯಂತ ಪ್ರಾಚೀನ ಐತಿಹಾಸಿಕ ನೆಲೆ. ಚೆಂಗಾಳ್ವರ ಆಡಳಿತ ಕೇಂದ್ರ. 11ನೇ ಶತಮಾನದಲ್ಲಿ ಹನಸೋಗೆ ಜೈನ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಅಲ್ಲಿ 60ಕ್ಕೂ ಹೆಚ್ಚು ಬಸದಿಗಳು ಇದ್ದ ಬಗ್ಗೆ ಶಾಸನಾಧಾರಗಳಿವೆ. ಅಲ್ಲಿ ತ್ರಿಕೂಟಾಚಲ ಜೈನ ಬಸದಿ ಇದೆ. ಚಂಗಾಳ್ವರ ದೊರೆ ವೀರ ರಾಜೇಂದ್ರನು ಆದಿನಾಥ, ಚಂದ್ರನಾಥ ಮತ್ತು ನೇಮಿನಾಥ ತೀರ್ಥಂಕರರ ಬಸದಿಯನ್ನು ನಿರ್ಮಿಸಿದ್ದಾನೆ. ಕಳಸದ ದೇವಚಂದ್ರ ದೇವ ಪನಸೋಗೆಯ ಲಲಿತಕೀರ್ತಿಗಳ ಶಿಷ್ಯರಾಗಿದ್ದರು. ಶೈವ-ಜೈನ ಸಂಘರ್ಷಗಳಿಂದ ದೇವಚಂದ್ರ ಕಳಸಕ್ಕೆ ಬಂದು ಚಂದ್ರನಾಥ ಬಸದಿಯನ್ನು ನಿರ್ಮಾಣ ಮಾಡಿದರು.

Also Read  ಕಾರವಾರ: ಅಕ್ರಮ ಮದ್ಯ ಸಾಗಾಟ, ಓರ್ವನ ಬಂಧನ.!!

ಅದೇ ಬಸದಿಯ ಚರ್ತುವಿಂಶತಿ ತೀರ್ಥಂಕರರ ವಿಗ್ರಹದ ಪೀಠದಲ್ಲಿನ ಶಾಸನದಲ್ಲಿ, ಶ್ರೀ ಚಂದ್ರನಾಥನ ಚೈತ್ಯಾಲಯದಲು ತೊಳಹರ ಬಳಿಯ ಅನತಕಶೆಟ್ಟಿತಿಯ (ಅನಂತಕ್ಕಶೆಟ್ಟಿತಿ) ಮಗ ಆದಿಶೆಟ್ಟಿ ಚತುರ್ವಿಂಶತಿ ತೀರ್ಥಂಕರರ ಪ್ರತಿಮೆಯನು ಯಿರಿಸಿ ಕೃತಾರ್ತನಾದದ್ದನ್ನು ದಾಖಲಿಸಿದೆ. ಈ ಶಾಸನದ ಕಾಲ ಕ್ರಿ.ಶ. 1535. ಅಂದರೆ, 1535 ರ ಕಾಲಕ್ಕೆ ಚಂದ್ರನಾಥ ಬಸದಿ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. ಸಾಂತರ ಆಳ್ವಿಕೆಗೆ ಒಳಪಟ್ಟ ಹಲವು ಪ್ರಮುಖ ಜೈನ ತೀರ್ಥಕ್ಷೇತ್ರಗಳಲ್ಲಿ ಕಳಸವನ್ನೂ ಹೆಸರಿಸಲಾಗಿದೆ. ಪ್ರಸ್ತುತ ಅಧ್ಯಯನಕ್ಕೆ ಒಳಪಟ್ಟಿರುವ ಶಾಸನದ ಕಾಲ ಕ್ರಿ.ಶ. 1512. ಈ ಕೊನೆಯ ಎರಡು ಶಾಸನಗಳ ಕಾಲಕ್ಕಿಂತ ಮೊದಲೇ, ಲಲಿತಕೀರ್ತಿ ಮುನಿಗಳ ಶಿಷ್ಯರಾದ ದೇವಚಂದ್ರರು ಚಂದ್ರನಾಥ ತೀರ್ಥಂಕರರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರೆಂದು ಇದರಿಂದ ತಿಳಿಯುತ್ತದೆ.

ಇದು ವಿಜಯನಗರದ ಮಾಂಡಲೀಕರಾಗಿದ್ದ ಕಳಸ-ಕಾರ್ಕಳದ ಭೈರರಸ ಒಡೆಯರ ಕಾಲದ ಶಾಸನವಾಗಿದೆ. ಇವರು ತಮ್ಮನ್ನು ಕಳಸ ಕಾರ್ಕಳದ ಅರಸರೆಂದೇ ಗುರುತಿಸಿಕೊಂಡರು ಎಂದು ಪಿ.ಎನ್. ನರಸಿಂಹಮೂರ್ತಿಯವರು ತಿಳಿಸಿದ್ದಾರೆ ಶಾಸನೋಕ್ತ ಚಂದ್ರಪ್ರಭ ಅಥವಾ ಚಂದ್ರನಾಥ ತೀರ್ಥಂಕರ 24 ಜನ ಜೈನ ತೀರ್ಥಂರರಲ್ಲಿ 8 ನೆಯವರು ಅಥವಾ ಎಂಟನೇ ತೀರ್ಥಂಕರ. ಚಂದ್ರ ಅಥವಾ ಅರ್ಧಚಂದ್ರ ಆತನ ಲಾಂಛನವಾಗಿದೆ. ನಾಗ ಅಥವಾ ನಾಗಕೇಸರ ಆತನ ಪವಿತ್ರ ವೃಕ್ಷವಾಗಿದೆ. ಜ್ವಾಲಾ-ಮಾಲಿನ ಆತನ ಅಭಿಮಾನಿ ದೇವತೆಯಾಗಿದ್ದಾಳೆ.

Also Read  ನ.17ರಿಂದ ಡಿಗ್ರಿ ಕಾಲೇಜ್ ಆರಂಭ ➤ ಡಾ.ಅಶ್ವತ್ಥ ನಾರಾಯಣ ಘೋಷಣೆ

ಶಾಸನದ ಪೂರ್ಣಪಾಠ
1. 0. ಅಗಿರ ಸಂವತ್ಸರದ ಅಸಡ
2. 0. ಸುಂದ ದಸಮಿ ಮೂರ ವಿವ
3. 0. ರ ದಂಲು ಶ್ರೀಮತು ದೇವ ಚಂ
4. 0. ದ್ರ ದೇವರು ಕಳಸದ ಚಂದ್ರನ
5. 0. ತ ಅವಂತ್ರವದ ಸಮಂದ
6. 0. ಪ್ರತಿ ಚಂದ್ರನತನ ಗೆಯಿ
7. 0. ಸಿ ನಿಂಲಿಸಿ ಕಿವಿಲಿ ಕೇಳಿದಕೆ
8. 0. ಕಂಣಲಿ ನೋಡಿದಕೆ ಪ್ರಾಚಿ
9. 0. ತ ಯಿರಿಸಿದ ಚಂದ್ರನ
10. – – –
ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಹಂಪೆ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಕಳಸದ ಸುಪ್ರೀತ ಕೆ. ಎನ್. ಹಾಗೂ ಕಳಸದ ಚಂದ್ರನಾಥ ಬಸದಿಯ ಅರ್ಚಕರಾಧ ಶ್ರೀ ಅಜಿತ್ ರವರಿಗೆ ನಾನು ಅಭಾರಿಯಾಗಿದ್ದೇನೆ.

error: Content is protected !!
Scroll to Top