(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.9.ಭ್ರೂಣಹತ್ಯೆ ಮನುಕುಲಕ್ಕೆ ಮಾರಕ ಅಷ್ಟೇ ಅಲ್ಲ ಅಮಾನವೀಯವಾಗಿದ್ದು ಇದು ಮುಂದುವರಿದ ನಾಗರಿಕ ಸಮಾಜದಲ್ಲಿ ನಡೆಯುತ್ತಿರುವುದು ಅತ್ಯಂತ ಭೀಕರ ಸಂಗತಿಯಾಗಿದೆ, ಇದನ್ನು ತಡೆಯಲು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಬದುಕು ಕಟ್ಟಿಕೊಳ್ಳಲು ಮಹಿಳೆ ಅತ್ಯವಶ್ಯಕ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ.ರಾಮಕೃಷ್ಣ ರಾವ್ ಹೇಳಿದರು.
ಶನಿವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಯೋಜನೆಯಡಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಸಿಯುತ್ತಿರುವ ಮಕ್ಕಳ ಲಿಂಗಾನುಪಾತ ತಜ್ಞರೊಂದಿಗೆ ಸಮಾಲೋಚನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಸಂಖ್ಯೆ ಇಳಿಮುಖವಾಗುವ ವೇಗದಲ್ಲಿ ಹೆಣ್ಣುಮಕ್ಕಳ ಸಂಖ್ಯೆಯು ನಶಿಸಿ ಹೋಗುತ್ತಿದೆ. ಸಮಾಜದಲ್ಲಿ ಗಂಡು ಹೆಣ್ಣಿನ ಸಮಾನತೆಯನ್ನು ಕಾಪಾಡಿಕೊಳ್ಳಬೇಕು.ಹಾಗೂ ಸ್ಕ್ಯಾನಿಂಗ್ ಸೆಂಟರ್‍ಗಳು ಜಾಸ್ತಿಯಾಗುತ್ತಾ ಹೋದಂತೆ ಹೆಣ್ಣು ಶಿಶುವನ್ನು ಪ್ರಾರಂಭಿಕ ಹಂತದಲ್ಲೇ ನಾಶ ಮಾಡಲಾಗುತ್ತಿದೆ, ಹೆಣ್ಣು ಭ್ರೂಣ ಹತ್ಯೆಯನ್ನುತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರು, ತಂತ್ರಜ್ಞರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಮೈಸೂರು ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹನಿರ್ದೇಶಕರಾದ ಡಾ. ರಾಮಚಂದ್ರ ಬಾಯರಿ ಅವರು ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆ ಹಾಗೂ ಕಾನೂನು ಅನುಷ್ಠಾನದ ಕುರಿತು ವಿವರಿಸಿ ಮಾತನಾಡಿ, ಒಂದು ಸ್ವಸ್ಥ ಸಾಮಾಜಿಕ ಆರೋಗ್ಯವು ಸುಸ್ಥಿರ ಸಾಮಾಜಿಕ ಅಭಿವೃದ್ಧಿಯ ಆಧಾರಸ್ತಂಭ. ಜನಸಂಖ್ಯೆಯೊಂದರಲ್ಲಿ ಲಿಂಗಾನುಪಾತ ಎಂಬುದು ಪ್ರತಿ 1000 ಪುರುಷರ ಸಂಖ್ಯೆಗೆ ಇರುವ ಸ್ತ್ರೀಯರ ಸಂಖ್ಯೆಯನ್ನು ತಿಳಿಸುವ ಒಂದು ಮಾಪನ. ಮಕ್ಕಳ ಲಿಂಗಾನುಪಾತವು 0-6 ವರ್ಷ ವಯೋಮಾನದ ಹುಡುಗಿ, ಹುಡುಗರ ಸಂಖ್ಯಾನುಪಾತವನ್ನು ವಿವರಿಸುತ್ತದೆ. ತಂತ್ರಜ್ಞಾನದ ದುರ್ಬಳಕೆಯು ಭ್ರೂಣ ಲಿಂಗಾನುಪಾತವನ್ನು ವಿಕೃತಗೊಳಿಸುವಲ್ಲಿ ಮಹತ್ತರವಾದ ಕಾರಣವಾಗಿದೆ.
ತಂತ್ರಜ್ಞಾನದ ಬಳಕೆಯನ್ನು ನಿಯಂತ್ರಿಸಲು 1994ರಲ್ಲಿ ಜಾರಿಗೆ ತಂದ 2003ರಲ್ಲಿ ತಿದ್ದುಪಡಿ ಮಾಡಿ ಗರ್ಭಧಾರಣಾಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರಗಳು (ಪಿಸಿ & ಪಿಎನ್ ಡಿಟಿ) ಅಧಿನಿಯಮವು ಲಿಂಗ ಆಯ್ಕೆ ಪತ್ತೆಯನ್ನು ತಪ್ಪಿಸಲು ಒಂದು ಪ್ರಮುಖ ಉಪಕರಣವಾಗಿದೆ. ಪಿಸಿ & ಪಿಎನ್ ಡಿಟಿ ಅಧಿನಿಯಮದ ಅಂಶಗಳನ್ನು ಉಲ್ಲಂಘಿಸಿ. ಹೆಣ್ಣು ಭೂಣ ಹತ್ಯೆ ಮಾಡುವಂತೆ ಪ್ರೇರೇಪಿಸುವ ಗರ್ಭಿಣಿಯ ಪೋಷಕರು, ಅತ್ತೆ ಮಾವ ಕುಟುಂಬದ ಸದಸ್ಯರಿಗೆ ಕಾರಾಗೃಹ ಶಿಕ್ಷೆ ಜೊತೆಗೆ ದಂಡ ವಿಧಿಸಲಾಗುವುದು ಹಾಗೂ ವೈದ್ಯರಿಗೆ ಮೊದಲ ಸಲ 3 ವರ್ಷ ಜೈಲು ಶಿಕ್ಷೆ ಹಾಗೂ 50,000 ದಂಡ ಎರಡನೇ ಬಾರಿಗೆ 5 ವರ್ಷ ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಕುಟುಂಬವು ಗಂಡಿನಿಂದಲೇ ಮುಂದುವರೆಯುತ್ತದೆ ಎಂಬ ಆಧಾರದ ಮೇಲೆ ಹುಟ್ಟುಹಾಕಿರುವ ಬಹುಮಟ್ಟಿಗಿನ ಪಿತೃಪ್ರಧಾನತೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ವ್ಯವಸ್ಥೆಯು ಸಮಾಜದಲ್ಲಿ ಸ್ತ್ರೀಯರ ಎರಡನೇ ದರ್ಜೆಯ ಸ್ಥಾನಮಾನಕ್ಕೆ ಕಾರಣವಾಗಿದೆ. ಇದು ಕುಟುಂಬದಲ್ಲಿ ಹೆಣ್ಣು ಮಗುವಿನ ಜನನವನ್ನು ತಪ್ಪಿಸುವ ಮೂಢ ಬಯಕೆಗೆ ದಾರಿಮಾಡಿಕೊಟ್ಟಿದ್ದು, ಭ್ರೂಣದ ಲಿಂಗಾನುಪಾತವು ಅಪಾಯಕಾರಿಯಾಗಿ ಇಳಿಮುಖವಾಗಲು ದಾರಿ ಮಾಡಿಕೊಟ್ಟಿದೆ. ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆ ಬಗ್ಗೆ ಜನರಿಗೆ ತಿಳಿದಿದ್ದರೂ ಅದರ ಮಾಹಿತಿ ಕೊರತೆ ಇದೆ ಎಂದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಕಮ್ಯೂನಿಟಿ ಮೆಡಿಸನ್ ಪ್ರಧ್ಯಾಪಕರಾದ ಡಾ.ರಶ್ಮಿ ಹೇಳಿದರು.
ಸಮಾಲೋಚನೆಚಿಯನ್ನು ಉದ್ದೇಶಿಸಿ ಮಾತನಾಡಿದ, ಸ್ತ್ರಿರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಪೂರ್ಣಿಮಾ, ಗರ್ಭಪಾತ ಹೆಚ್ಚಾಗುತ್ತಿರುವುದಕ್ಕೆ ಹೆಣ್ಣು ಭ್ರೂಣ ಹತ್ಯೆಯ ಜತೆಗೆ ವಿವಾಹ ಪೂರ್ವ ಗರ್ಭಧಾರಣೆ ಮತ್ತು ಭ್ರೂಣಗಳ ಬೆಳವಣಿಗೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳೂ ಕಾರಣ. ವೈದ್ಯರು, ವೈದ್ಯಕೀಯ ಸೌಲಭ್ಯಗಳು ಸಾಕಷ್ಟು ಸುಧಾರಿಸಿರುವುದರಿಂದ ಭ್ರೂಣದ ಬೆಳವಣಿಗೆಯಲ್ಲಿ ನ್ಯೂನತೆಗಳು ಕಂಡು ಬಂದರೆ, ಅದನ್ನು ಪೋಷಕರ ಗಮನಕ್ಕೆ ತರಲಾಗುತ್ತದೆ.
ಭ್ರೂಣದ ಮೆದುಳು, ಹೃದಯ ಸೇರಿದಂತೆ ಪ್ರಮುಖ ಅಂಗಾಂಗಗಳ ಬೆಳವಣಿಗೆಯಲ್ಲಿ ನ್ಯೂನತೆಗಳು ಕಂಡು ಬಂದರೆ ಅಥವಾ ಭ್ರೂಣದಿಂದ ತಾಯಿಯ ಜೀವಕ್ಕೆ ಕಂಟಕ ಉಂಟಾಗುವಂತಿದ್ದರೆ ಭ್ರೂಣಹತ್ಯೆಗೆ ಕಾನೂನಿನಲ್ಲಿ ಅವಕಾಶ ಇದೆ. ಭ್ರೂಣ ಲಿಂಗ ಪತ್ತೆ ತಡೆಯಲು ಸುಪ್ರೀಂಕೋರ್ಟ್‍ನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. “ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ-1994’ಯನ್ವಯ ಪ್ರಸೂತಿದಾರರು “ಅಲ್ಟ್ರಾಸೌಂಡ್ ಮಷೀನ್’ಗಳನ್ನು ಬಳಸಬಾರದು. ತರಬೇತಿ ಹೊಂದಿದ ರೆಡಿಯೋಲಾಜಿಸ್ಟ್‍ಗಳಿಗೆ ಮಾತ್ರ ಅವಕಾಶ ಕೊಡಬೇಕು ಎಂದು ಹೇಳಿದರು.ಸಮಾಲೋಚನೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿಖಂದರ್ ಪಾಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಸುಂದರ್ ಪೂಜಾರಿ, ಡಾ. ಡಿ.ಕೆ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.