(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.4.ಆಗಸ್ಟ್ 27 ರಂದು ನಾರಾವಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ 8 ಗ್ರಾಮ ಪಂಚಾಯತಿಗಳನ್ನು ಒಟ್ಟುಗೂಡಿಸಿ ಸ್ವಚ್ಛತೆಯಲ್ಲಿ ಸುಸ್ಥಿರತೆ ಸಾಧಿಸಲು ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರವೀಂದ್ರ ಪೂಜಾರಿಯವರ ಮುಂದಾಳತ್ವದಲ್ಲಿ ಸ್ವಚ್ಛ ನಾರಾವಿ- ಸ್ವಸ್ಥ ನಾರಾವಿ ಅಭಿಯಾನಕ್ಕೆ ದೀಪ ಬೆಳಗಿಸುವ ಮೂಲಕ ನಾರಾವಿ ಗ್ರಾ.ಪಂ ಸಭಾಂಗಣದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಾರಾವಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಸದಸ್ಯರಾದ ಧರಣೇಂದ್ರಕುಮಾರ್, ಮಾರ್ಗದರ್ಶಿ ಅಧಿಕಾರಿಯಾಗಿರುವ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್ ಕೆ ಮತ್ತು ನಾರಾವಿ, ವೇಣೂರು, ಮರೋಡಿ, ಕಾಶಿಪಟ್ಣ, ಹೊಸಂಗಡಿ, ಅರಂಬೋಡಿ, ಸುಲ್ಕೇರಿ ಮತ್ತು ಅಂಡಿಂಜೆ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗು ನಾರಾವಿ ಪಂಚಾಯತಿಯ ಸದಸ್ಯರುಗಳು, ಎಸ್‍ಕೆಡಿಆರ್‍ಡಿಪಿ ಸೇವಾ ಪ್ರತಿನಿಧಿಗಳು , ಆಶಾಕಾರ್ಯಕರ್ತೆಯರು , ಮತ್ತು ಇತರ ಆಸಕ್ತರು ಹಾಜರಿದ್ದರು.
ನಾರಾವಿ ಕ್ಷೇತ್ರವನ್ನು ಸ್ವಚ್ಛ ಕ್ಷೇತ್ರವಾಗಿಸಲು ಪಣತೊಟ್ಟು ಮಾಡಬಹುದಾದ ಏರ್ಪಾಟುಗಳ ಬಗ್ಗೆ ಎಲ್ಲ ಅಧ್ಯಕ್ಷರುಗಳು ಮತ್ತು ಅಭಿವೃದ್ಧಿ ಅಧಿಕಾರಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ವಿಸ್ತೃತವಾಗಿ ಹಂಚಿಕೊಂಡರು. ಮಾರ್ಗದರ್ಶಿ ಅಧಿಕಾರಿಯಾಗಿರುವ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು .ನಾರಾವಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಸದಸ್ಯ ಧರಣೇಂದ್ರಕುಮಾರ್ ಯೋಜನೆಯ ಉದ್ದೇಶದ ಬಗ್ಗೆ ಸಭೆಗೆ ವಿವರಿಸಿದರು.