(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.3.ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ವತಿಯಿಂದ ‘ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಮತ್ತು ಅದರ ಬಳಕೆಯ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ರವೀಂದ್ರ ಕಲಾಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿದ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ, ಶಿಕ್ಷಣ ಎಂಬುದು ವಿಜ್ಞಾನ ನಮ್ಮ ದಿನನಿತ್ಯದ ಅದೆಷ್ಟೋ ಸಮಸ್ಯೆಗಳನ್ನು ಪರಿಹರಿಸುತ್ತದೆ. ಧರ್ಮ, ಸಂಪ್ರದಾಯ ನಮ್ಮಲ್ಲಿ ಬೆಳೆಸದ ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ವಿಜ್ಞಾನ ಬೆಳೆಸುತ್ತದೆ ಎಂದರು. ಮಹಿಳೆಯರು ಈಗ ಎಲ್ಲಾ ರಂಗಗಳಲ್ಲೂ ತಮ್ಮ ಇರುವಿಕೆಯನ್ನು ಸಾಬೀತುಪಡಿಸುತ್ತಿದ್ದಾರೆ. ಅವರ ಕ್ರಿಯಾಶೀಲ, ಸ್ಪೂರ್ತಿದಾಯಕ ಪಾಲ್ಗೊಳ್ಳುವಿಕೆಗೆ ಜೀವನದ ಬದಲಾವಣೆಗಳು ಅಡ್ಡಿಯಾಗಬಾರದು, ಎಂದು ಅಭಿಪ್ರಾಯಪಟ್ಟ ಅವರು ಮಿತಿಗಳ ನಡುವೆಯೂ ಕ್ರಿಯಾಶೀಲವಾಗಿರುವ ಮೈಕ್ರೋಬಯೋಲಜಿ ವಿಭಾಗವನ್ನು ಶ್ಲಾಘಿಸಿದರು.
ನಿಟ್ಟೆ ವಿಶ್ವವಿದ್ಯಾನಿಲಯದ, ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ರೈ, ಡಿಎನ್‍ಎ ವಿಭಾಗದ ಅನೇಕ ಪ್ರತಿಗಳನ್ನು ಮಾಡಲು ಬಳಸಲಾಗುವ ಪಿಸಿಆರ್ ಕುರಿತಾಗಿ ವಿಶೇಷ ಮಾಹಿತಿ ನೀಡಿದರು. ಕಾಲೇಜಿನ ಪ್ರಯೋಗಾಲಯಕ್ಕೆ ಪಿಸಿಆರ್ ಸಲಕರಣೆಗಳನ್ನು ಪೂರೈಸಿದ ಮುಂಬೈನ ಹೈಮೀಡಿಯಾ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ನ ಶಾಂತಕುಮಾರ್ ಮತ್ತು ಗೋಪಿನಾಥ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ವಿವಿಧ ಕಾಲೇಜುಗಳ ಸುಮಾರು 45 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಭಾಗವಹಿಸಿದ್ದರು. ಅಪರೂಪದ ಸೌಲಭ್ಯವಾಗಿರುವ ಪಿಸಿಆರ್ ಲ್ಯಾಬ್ ವಿವಿದೆಡೆಗಳಿಂದ ಸಂಶೋಧಕರನ್ನು ಆಕರ್ಷಿಸುವ ಸಾಧ್ಯತೆಯಿದೆ. ಇದು ಇತರ ವಿದ್ಯಾಸಂಸ್ಥೆಗಳೊಂದಿಗೆ ಜಂಟಿ ಯೋಜನೆಗಳನ್ನು ಹಮ್ಮಿಕೊಳ್ಳಲು, ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಕಾಲೇಜಿಗೆ, ವಿಶ್ವವಿದ್ಯಾಲಯಕ್ಕೆ ಅನುಕೂಲವಾಗಲಿದೆ. ಮೈಕ್ರೋಬಯೋಲಜಿ ವಿಭಾಗದ ಮುಖ್ಯಸ್ಥೆ ಡಾ. ಭಾರತೀಪ್ರಕಾಶ್, ಪ್ರಾಧ್ಯಾಪಕಿ ಸುಮಂಗಲಾ ಸಿ. ಹೆಚ್ ಮೊದಲಾದವರು ಉಪಸ್ಥಿತರಿದ್ದರು.