(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.30.ಫಿಟ್ ಇಂಡಿಯಾ ಕಾರ್ಯಕ್ರಮದ ಪ್ರಯಕ್ತ ನಗರದ ಎಕ್ಕೂರಿನ ಸಮೀಪವಿರುವ ಮತ್ಸ್ಯನಗರ ಕ್ಯಾಂಪಸ್‍ನ ಮೀನುಗಾರಿಕಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಇಂದು ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ, ಕಾಲೇಜಿನ ಡೀನ್ ಡಾ. ಎ. ಸೆಂಥಿಲ್ ವೆಲ್ ಮಾತನಾಡಿ, ವಿದ್ಯಾರ್ಥಿ ಮತ್ತು ಭೋದಕ-ಭೋದಕೇತರ ಸಿಬ್ಬಂದಿಯವರು ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳ ಜೊತೆ ದೈಹಿಕ ವ್ಯಾಯಾಮವನ್ನು ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಆರೋಗ್ಯ ಸುಧಾರಣೆ ಮಾಡಬಹುದಾಗಿದೆ ಎಂದು ಹೇಳಿದರು. ಕಾಲೇಜಿನ ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಎ.ಟಿ ರಾಮಚಂದ್ರ ನಾಯ್ಕ ಮಾತನಾಡಿ, ನಮ್ಮ ದೇಶದಲ್ಲಿ ರೈತರು ದಿನನಿತ್ಯ ತಮ್ಮ ಹೊಲ-ಗದ್ದೆಗಳಲ್ಲಿ ಶ್ರಮವಹಿಸಿ ಕೆಲಸ ಮಾಡುವುದರಿಂದ ಅವರಿಗೆ ಯಾವುದೇ ರೀತಿಯ ವ್ಯಾಯಾಮದ ಅವಶ್ಯಕತೆ ಇರುವುದಿಲ್ಲ.
ಆದರೆ, ಶಾಲಾ-ಕಾಲೇಜುಗಳಲ್ಲಿ, ಕೆಲಸ ನಿರ್ವಹಿಸುವ ನೌಕರರು ತಾವುಗಳು ಮಾಡುವ ಕಾರ್ಯವೈಖರಿಗಳಲ್ಲಿ ಒತ್ತಡ ಇರುವ ಸನ್ನಿವೇಶಗಳಿರುವುದರಿಂದ ದಿನಕ್ಕೊಮ್ಮೆಯಾದರು ಒಂದಲ್ಲಾ ಒಂದು ರೀತಿಯ ದೈಹಿಕ ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ ದೇಹವನ್ನು ಸಮತೋಲನದಲ್ಲಿಡಲು ಸಹಕಾರಿಯಾಗುತ್ತದೆಂದು ಹೇಳಿದರು.ಕಾಲೇಜಿನ ಕ್ಯಾಂಪಾಸ್ ನಲ್ಲಿ ಕಛೇರಿಯ ಸಮಯದ ನಂತರ ಒಂದು ತಾಸಿನವರೆಗೆ ವಿವಿಧ ರೀತಿಯ ಆಟೋಟ ಮತ್ತು ವ್ಯಾಯಾಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಎನ್ನೆಸ್ಸೆಸ್ ಘಟಕವು ದೈಹಿಕ ಶಿಕ್ಷಣ ವಿಭಾಗ ಮತ್ತು ವಿಸ್ತರಣಾ ವಿಭಾಗಗಳ ಸಹಯೋಗದಿಂದ ನಡೆಸುವಂತೆ ತೀರ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ ‘ಫಿಟ್ ಇಂಡಿಯ ಮೂವ್‍ಮೆಂಟ್’ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.