(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.26. ನೂಜಿಬಾಳ್ತಿಲ ರೆಂಜಿಲಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆದ 35ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಸಮಾರೋಪ ಸಮಾರಂಭ ರವಿವಾರ ನೂಜಿಬಾಳ್ತಿಲ ಉ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.
ಪುತ್ತೂರು ತಾ.ಪಂ. ಅಧ್ಯಕ್ಷ ರಾಧಕೃಷ್ಣ ಬೋರ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಜನತೆಯಿಂದ ಮಾಡಲಾಗದ ಕೆಲಸವಿಲ್ಲ, ಯುವ ಜನರು ಸಂಘಟನೆ ಜೊತೆಗೆ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡು ಸಮಾಜದ, ಬಡಜನರ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕಾಗಿದೆ. ಮಕ್ಕಳಾಗಿರುವಾಗಲೇ ಅವರಿಗೆ ಸರಿಯಾದ ಮಾರ್ಗದರ್ಶನ ದೊರೆತಲ್ಲಿ ಯಾವುದೇ ವ್ಯಕ್ತಿ ದಾರಿ ತಪ್ಪಲು ಸಾಧ್ಯವಿಲ್ಲ, ಮಕ್ಕಳಿಗೆ ಉತ್ತಮ ರೀತಿಯ ಪ್ರೋತ್ಸಾಹ ದೊರೆತಾಗ ಸಧೃಡ ಸಮಾಜ ನಿರ್ಮಾಣ ಸಾಧ್ಯವಿದೆ ಎಂದ ಅವರು, ದೇಶ ರಕ್ಷಣೆಯಲ್ಲಿ ಪಾಲ್ಗೊಂಡ ಸೈನಿಕರನ್ನು ಗೌರವಿಸಿರುವುದರಿಂದ ಸಂಘಟನೆಯ ಕೀರ್ತಿ ಇನ್ನೂ ಹೆಚ್ಚಾಗಿದೆ ಎಂದರು.
ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಮಾತನಾಡಿ, ನಮ್ಮ ನಾಡು, ನುಡಿಯೊಂದಿಗೆ ದೇಶದ ಸೈನಿಕರನ್ನು, ರೈತರನ್ನು ಎಂದಿಗೂ ಮರೆಯಬಾರದು, ಅವರ ಸೇವೆಯಿಂದಲೇ ದೇಶ ಸುಭೀಕ್ಷವಾಗಿರಲು ಸಾಧ್ಯವಾಗಿದ್ದು, ಶ್ರೀಕೃಷ್ಣನ ಬದುಕಿನ ಹಾದಿ ಎಲ್ಲರಿಗೂ ದಾರಿ ದೀಪವಾಗಿದೆ. ಶ್ರೀ ಕೃಷ್ಣ ಧರ್ಮದ ಬದುಕಿಗೆ ದಾರಿತೋರಿದ್ದಾನೆ, ರಾಜನನ್ನು ಧರ್ಮದೆಡೆಗೆ ನಡೆಸಿದಾಗ ಅಲ್ಲಿ ಸುಸೂತ್ರ ಆಡಳಿತ ದೊರೆಯುತ್ತದೆ ಎಂದರು. ನೂಜಿಬಾಳ್ತಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆನಂದ ಎ. ಮಾತನಾಡಿದರು.
ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ, ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹರಿಶ್ಚಂದ್ರ ಕನ್ವಾರೆ, ಕಡಬ ಪೊಲೀಸ್ ಸಿಬ್ಬಂದಿ ನೇತ್ರಕುಮಾರ್, ತಾರನಾಥ್ ಉಪಸ್ಥಿತರಿದ್ದರು. ಕುಶಾಲಪ್ಪ ಗೌಡ ನಡುವಳಿಕೆ ಸ್ವಾಗತಿಸಿ, ಸಮಿತಿಯ ಅಧ್ಯಕ್ಷ ಜಯಂತ್ ಬರೆಮೇಲು ವಂದಿಸಿದರು. ಪುರುಷೋತ್ತಮ ಕುಕ್ಕುತ್ತಡಿ ಹಾಗೂ ಗಣೇಶ್ ನಡುವಳಿಕೆ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿತರಣೆ;
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಂಗನವಾಡಿ ಪುಟಾಣಿಗಳಿಗೆ, ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.
ಸಮ್ಮಾನ:
ಉತ್ಸವ ಸಮಿತಿ ವತಿಯಿಂದ ಸೈನಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೂಜಿಬಾಳ್ತಿಲದ ದಿವಾಕರ ಗೌಡ ಕೇಪುಂಜ ಹಾಗೂ ಅಬ್ರಾಹಂ ಜಿ. ಕೊಡೆಂಕಿರಿಯಡ್ಕ ಅವರನ್ನು ಅತಿಥಿಗಳು ಸಾಲು ಹೊದಿಸಿ, ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಸಮ್ಮಾನಿಸಿದರು. ಸಮ್ಮಾನಿತ ಪರವಾಗಿ ಮಾತನಾಡಿದ ದಿವಾಕರ ಗೌಡ ಕೇಪುಂಜ, ಊರಿನಲ್ಲಿ ನಾವು ಪಡೆಯುವ ಸಮ್ಮಾನವು ನಮಗೆ ದೊರೆಯುವ ಅತೀ ದೊಡ್ಡ ಗೌರವವಾಗಿದೆ. ಸೈನ್ಯದಲ್ಲಿ ಸೇವೆ ಸಲ್ಲಿಸಲು ಪರೀಕ್ಷೆಯಲ್ಲಿ ಗಳಿಸಿದ ಅಂಕಕ್ಕಿಂತ ಶಿಸ್ತು, ಸಂಯಮವಿರಬೇಕು. ಯುವ ಜನತೆ ಹೆಚ್ಚಾಗಿ ಸೈನ್ಯಕ್ಕೆ ಸೇರವಲ್ಲಿ ಮುಂದೆ ಬರಬೇಕು ಎಂದ ಅವರು, ವಿದ್ಯಾಸಂಸ್ಥೆಗಳಲ್ಲಿ ಸೈನಿಕರಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಮಕ್ಕಳಿಗೂ ಸೈನ್ಯದ ಬಗ್ಗೆ ಆಸಕ್ತಿ ಬರಲಿದೆ ಎಂದರು. ಹರ್ಷಿತ್ ನಡುವಳಿಕೆ ಸನ್ಮಾನಿತರ ಪತ್ರ ವಾಚಿಸಿದರು.