(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.26.ಕಡಬ ವಲಯ ಮಟ್ಟದ ಖೋ ಖೋ ಪಂದ್ಯಾವಳಿ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಯಿತು.
ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಬಳ್ಳೇರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ಕ್ರೀಡೆ ಜೀವನದ ಒಂದು ಭಾಗವಾಗಿದ್ದು, ಆರೋಗ್ಯಕರ ಶಿಸ್ತು, ಸಾಮರಸ್ಯ ಬೆಳೆಯಲು ಕ್ರೀಡೆ ಸಹಕಾರಿ. ಕ್ರೀಡೆಯಲ್ಲಿ ಗೆದ್ದರೂ ಅಥವಾ ಸೋತರೂ, ಭಾಗವಹಿಸುವುದರಿಂದ ನಮ್ಮ ದೈಹಿಕ, ಮಾನಸಿಕ ಸಧೃಡತೆ ಸಾಧ್ಯ ಎಂದರು.ಬಿಳಿನೆಲೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ ಮಾತನಾಡಿ, ವಿವಿಧ ವಿಶೇಷತೆಗಳನ್ನು ಹೊಂದಿರುವ ಖೋ ಖೋ ಆಟದಲ್ಲಿ ಆಟಗಾರನಿಗೆ ದೈಹಿಕ, ಶಾರೀರಿಕ ಚತುರತೆ ಮುಖ್ಯ ಎಂದರು.
ನೂಜಿಬಾಳ್ತಿಲ ಸಿ.ಆರ್.ಪಿ. ಗೋವಿಂದ ನಾಯಕ್ ಮಾತನಾಡಿ, ಖೋ ಖೋ ಆಟಕ್ಕೂ ಕಲಿಕೆಗು ಸಂಬಂಧವಿದ್ದು, ಖೋ ಖೋ ಆಟದಲ್ಲಿ ವಿವಿಧ ಕೌಶಲ್ಯತೆಗಳು ಒಳಗೊಂಡಿದ್ದು, ಇದು ಕಲಿಕೆಯ ಉತ್ತೇಜನಕ್ಕೂ ಸಹಕಾರಿ ಎಂದರು. ತಾ.ಪಂ. ಸದಸ್ಯ ಗಣೇಶ್ ಕೈಕುರೆ ಮಾತನಾಡಿದರು. ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಓಂತ್ರಡ್ಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ರೈ, ನೂಜಿಬಾಳ್ತಿಲ ಸಿವಿಲ್ ಇಂಜಿನಿಯರ್ ದುರ್ಗಪ್ರಸಾದ್ ಕೆ.ಪಿ., ಶಾಲಾ ಶಾರೀರಿಕ ಶಿಕ್ಷಕ ಬಾಲಕೃಷ್ಣ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಶ್ರೇಯಾನ್ಸ್ ಎಚ್.ಎಸ್. ಸ್ವಾಗತಿಸಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ವಂದಿಸಿದರು. ಶಿಕ್ಷಕಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ:
ಕಡಬ ವಲಯ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ನೂಜಿಬಾಳ್ತಿಲ ಸ.ಉ.ಹಿ.ಪ್ರಾ. ಶಾಲೆ ಪ್ರಥಮ ಸ್ಥಾನ ಹಾಗೂ ಹಳೆನೇರೆಂಕಿ ಸ.ಉ.ಹಿ.ಪ್ರಾ.ಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ಕಡಬ ಸ.ಹಿ.ಪ್ರಾ.ಶಾಲೆ ಪ್ರಥಮ ಸ್ಥಾನವನ್ನೂ, ಹಳೆನೇರೆಂಕಿ ಸ.ಉ.ಹಿ.ಪ್ರಾ. ಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತದೆ.