(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.21.ನೂಜಿಬಾಳ್ತಿಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಇಚ್ಲಂಪಾಡಿ ನೇರ್ಲ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಬುಧವಾರ ನಡೆಯಿತು.
ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ರಂಗದಲ್ಲೂ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲೆಯ ಬಗ್ಗೆ ಆಸಕ್ತಿ ಹೆಚ್ಚಾಗುವುದರೊಂದಿಗೆ, ಮುಂದಿನ ದಿನಗಳಲ್ಲಿ ಅದು ಪ್ರಯೋಜನಕಾರಿಯಾಗಲಿದೆ ಎಂದ ಅವರು ವಿದ್ಯಾರ್ಥಿ ಜೀವನದಲ್ಲಿ ಬರುವ ಅವಕಾಶಗಳು ಮುಂದಿನ ಪೂರಕ ಬದುಕಿಗೆ ಮೆಟ್ಟಿಲು ಎಂದರು. ಕೌಕ್ರಾಡಿ ಗ್ರಾ.ಪಂ. ಉಪಾಧ್ಯಕ್ಷೆ, ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ವಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಇಲ್ಲಿನ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಮಿಂಚಲಿ ಎಂದು ಹಾರೈಸಿದರು.
ವೇದಿಕೆ ಏರಲು ಹಿಂಜರಿಯದಿರಿ;
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ಮಾತನಾಡಿ, ಜಗತ್ತಿನ ದಿಗ್ಗಜ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ ತನ್ನ ಪ್ರಾಥಮಿಕ ತರಗತಿಯಲ್ಲಿ ಮೊದಲ ಬಾರಿಗೆ ವೇದಿಕೆಗೆ ಕಳುಹಿಸಿದಾಗ ಅಳುತ್ತಾನೆ. ಆದರೆ ಬಳಿಕದ ದಿನದಲ್ಲಿ ವೇದಿಕೆ ಏರಿ ತನ್ನ ಪ್ರತಿಭೆ ತೋರ್ಪಡಿಸಿ ಇಂದು ಜಗತ್ತಲ್ಲಿಯೇ ಶ್ರೇಷ್ಠ ಹಾಸ್ಯ ದಿಗ್ಗಜ ಕಲಾವಿದನಾಗಿ ಗುರ್ತಿಸಿಕೊಂಡಿದ್ದಾನೆ. ಇದು ಆತನ ಪರಿಶ್ರಮದಿಂದ ಸಾಧ್ಯವಾಗಿದ್ದು, ಆದ್ದರಿಂದ ವಿದ್ಯಾರ್ಥಿಗಳೂ ವೇದಿಕೆ ಏರಲು ಹಿಂಜರಿಯದೇ ಮುಂದೆ ಬನ್ನಿ ಎಂದರು.
ಗ್ರಾ.ಪಂ. ಸದಸ್ಯ ಶ್ರೀನಿವಾಸ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ತುಡಿತವಿದ್ದಾಗ, ಸ್ಪರ್ದೆಯಲ್ಲಿ ಸಲೂಸಾಗಿ ಮುನ್ನಡೆಯಬಹುದೆಂದರು. ನೂಜಿಬಾಳ್ತಿಲ ಸಿ.ಆರ್.ಪಿ. ಗೋವಿಂದ ನಾಯಕ್ ಮಾತನಾಡಿ, ಪಠ್ಯದ ಜೊತೆಗೆ ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ತೋರ್ಪಡಿಸಲು ಇರುವ ವೇದಿಕೆ ಇದನ್ನು ಬಳಸಿಕೊಳ್ಳಿ ಎಂದರು. ತಾ.ಪಂ. ಸದಸ್ಯೆ ಕೆ.ಟಿ. ವಲ್ಸಮ್ಮ, ಗ್ರಾ.ಪಂ. ಸದಸ್ಯರಾದ ಅನ್ನಮ್ಮ, ಮೋಹಿನಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶಾಂತರಾಮ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶಾಂತಿ ವಿ. ಭಟ್ ಸ್ವಾಗತಿಸಿ, ಶಿಕ್ಷಕ ಸಂದೀಪ್ ಕುಮಾರ್ ವಂದಿಸಿದರು. ಗಿರೀಶ್ ಎಚ್.ಎಂ. ಕಾರ್ಯಕ್ರಮ ನಿರೂಪಿಸಿದರು.