(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.21.ನಗರದ ಸಿವಿಲ್ ಗುತ್ತಿಗೆದಾರರೊಬ್ಬರ ಮನೆಯಿಂದಲೇ ಚೆಕ್ ಕದ್ದು 4.15 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಗುತ್ತಿಗೆದಾರ ಟಿಎ ಮೊಮಹಮ್ಮದ್ ರಫೀಕ್ ಎಂಬವರು ನಗರದಲ್ಲಿ ಇಲ್ಲದ ವೇಳೆಯಲ್ಲಿ ಅವರ ಮನೆಯಿಂದ ಅವರ ಸಂಬಂಧಿಕನೊಬ್ಬ ಚೆಕ್ ಪುಸ್ತಕ ಕದ್ದು, ಬ್ಯಾಂಕ್ ಆಫ್ ಬರೋಡದ ಖಾತೆಯಿಂದ ನಾಲ್ಕು ಲಕ್ಷ ರೂಪಾಯಿ ಲಪಟಾಯಿಸಿದ ಪ್ರಕರಣ ನಡೆದಿದೆ.ತಮ್ಮ ಮನೆಗೆ ಬರುತ್ತಿದ್ದ ತನ್ನ ಭಾವನ ಮಗ ಮೊಹಮ್ಮದ್ ಹಬೀಬುಲ್ಲ ಎಂಬಾತ ಮನೆಯಲ್ಲಿ ತನ್ನ ಬ್ಯಾಗಲ್ಲಿ ಇರಿಸಿದ ಚೆಕ್ ಕಳ್ಳತನ ಮಾಡಿ, ಅನಂತರ ಚೆಕ್ಕಿಗೆ ನಕಲಿ ಸಹಿ ಹಾಕಿ ತನ್ನ ಸಹೋದರ ಸಫೀಯುಲ್ಲ ಹೆಸರಿಗೆ ಚೆಕ್ ನೀಡಿದ್ದಾನೆ.
ಬ್ಯಾಂಕ್ ಆಫ್ ಬರೋಡದ ಚಾಲ್ತಿ ಖಾತೆಯಿಂದ ಹಣ ಪಡೆಯಲಾಗಿತ್ತು. ಎರಡನೇ ಬಾರಿ ಮತ್ತೊಂದು ಚೆಕ್ ನೀಡಿರುವ ವೇಳೆಗೆ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಬ್ಯಾಂಕಿನವರು ಚೆಕ್ ವಾಪಾಸ್ ಮಾಡಿದ್ದರು. ಈ ಮಧ್ಯೆ, ಹಣ ತೆಗೆದಿರುವ ಮಾಹಿತಿ ಹೊಸದಿಲ್ಲಿಗೆ ವ್ಯವಹಾರ ನಿಮಿತ್ತ ಹೋಗಿದ್ದ ರಫೀಕ್ ಅವರ ಗಮನಕ್ಕೆ ಬಂದಿದ್ದು, ಅವರು ಅಲ್ಲಿಂದಲೇ ನೇರವಾಗಿ ಇ ಮೇಲ್ ಮೂಲಕ ಮಂಗಳೂರು ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದರು. ಅನಂತರ ರಫೀಕ್ ಅವರ ವಿವಾಹಿತ ಪುತ್ರಿ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಲೇಡಿಹಿಲ್ ಸಮೀಪದ ಹ್ಯಾಟ್ ಹಿಲ್ ನಿವಾಸಿ ಆಗಿರುವ ಮೊಹಮ್ಮದ್ ರಫೀಕ್ ನಿವಾಸಕ್ಕೆ ಅವರಿಲ್ಲದ ವೇಳೆ ಆ.16ರಂದು ಮಧ್ಯಾಹ್ನ ಆರೋಪಿಗಳ ಪೈಕಿ ಒಬ್ಬನಾದ ಹಬೀಬ್ ಆಗಮಿಸಿದ್ದ. ಆಗ ಅಲ್ಲಿಂದ ಎರಡು ಚೆಕ್ ಲೀಫ್ ಕದ್ದುಕೊಂಡು ಹೋಗಿದ್ದ. ಮರುದಿನ ಆರೋಪಿಯು ತನ್ನ ಸಹೋದರ ಮೊಹಮ್ಮದ್ ಸಫೀಯುಲ್ಲ ಹೆಸರಿಗೆ ನಕಲಿ ಸಹಿ ಚೆಕ್ ನೀಡಿ, ಅನಂತರ ಬ್ಯಾಂಕಿನಿಂದ ಹಣ ಪಡೆದುಕೊಂಡಿದ್ದರು.ಬ್ಯಾಂಕಿನಿಂದ ಹಣ ವರ್ಗಾವಣೆ ಆಗಿರುವುದು ಗಮನಕ್ಕೆ ಬಂದ ಮೇಲೆ ರಫೀಕ್ ಅವರು ದೆಹಲಿಯಿಂದ ದೂರವಾಣಿ ಮೂಲಕ ಪುತ್ರಿಯನ್ನು ಸಂಪರ್ಕಿಸಿ ಬ್ಯಾಂಕಿನಲ್ಲಿ ವಿಚಾರಣೆ ನಡೆಸುವಂತೆ ಹೇಳಿದಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಸಂಬಂಧಿಕನಾಗಿದ್ದ ಹಬೀಬ್ ಪಡೀಲ್ ದರ್ಬಾರ್ ಹಿಲ್ ನಿವಾಸಿಯಾಗಿದ್ದು, ಕೆಲವೊಮ್ಮೆ ನಿವಾಸಕ್ಕೆ ಬರುತ್ತಿದ್ದ ಎಂದು ರಫೀಕ್ ತಿಳಿಸಿದ್ದು, ಇದೀಗ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿರುವ ಬಗ್ಗೆ ಕೂಡ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ನಕಲಿ ಸಹಿ ಬ್ಯಾಂಕ್ ಸಿಬ್ಬಂದಿ ಗಮನಕ್ಕೆ ಯಾಕೆ ಬಂದಿಲ್ಲ ಎಂದವರು ಪ್ರಶ್ನಿಸಿದ್ದಾರೆ.