ಲೈಂಗಿಕ ಕಿರುಕುಳ ನಿಯಂತ್ರಣ ➤ ಕಾಯಿದೆ ಪರಿಣಾಮಕಾರಿ ಜಾರಿಗೆ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.21.ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತವು ಕುಸಿಯುತ್ತಿದ್ದು ಆದುದರಿಂದ ಮಹಿಳಾ ಪರ ಸಮಿತಿಗಳು ಮತ್ತು ಇಲಾಖೆಯು ತುಂಬಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೆಂಟರ್ ಫಾರ್ ಡೆವಲಪ್‍ಮೆಂಟ್ ಸ್ಟಡೀಸ್ ಆ್ಯಂಡ್ ಎಜುಕೇಶನ್, ಮಂಗಳೂರು ಇಲ್ಲಿನ ಅಧ್ಯಕ್ಷೆ ಸಿ.ರೀಟಾ ನೊರೊನ್ಹಾ ಕರೆ ನೀಡಿದರು.


ಅವರು ಮಂಗಳವಾರ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ “ಹೆಣ್ಣು ಮಗುವನ್ನು ರಕ್ಷಿಸಿ’ ಹೆಣ್ಣು ಮಗುವನ್ನು ಓದಿಸಿ” ಕಾರ್ಯಕ್ರಮದಡಿಯಲ್ಲಿ “ ಪ್ರಸವ ಪೂರ್ವ ಲಿಂಗ ಪತ್ತೆ ತಡೆ ಕಾಯ್ದೆ 1994”ನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವಿಧ ಸಮಿತಿಗಳ ಸಮನ್ವಯ ಸಭೆಯಲ್ಲಿ ಮಾತನಾಡಿದರು.

ಲಿಂಗತ್ವ ಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯ, ಭ್ರೂಣ ಹತ್ಯೆ ನಿಷೇಧ, ಮಹಿಳಾ ಸಬಲೀಕರಣ, ಶಿಕ್ಷಣ, ಮಹಿಳೆಯರ ಪರ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಅದರ ಜೊತೆಗೆ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಮಾನವೀಯತೆಯನ್ನು ಸಮಾಜಕ್ಕೆ ತಿಳಿಯಪಡಿಸುವ ಅಗತ್ಯತೆ ಹೆಚ್ಚಿದೆ ಎಂದು ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿದ ಸಿ.ರೀಟಾ ನೊರೊನ್ಹಾ ಹೇಳಿದರು.ಸಮೀಕ್ಷಾ ಸಮಿತಿ, ಲಿಂಗತ್ವ ಸಮಾತ ಸಾಂಸ್ಥೀಕರಣ ಸಮಿತಿ, ಮಾಧ್ಯಮ ಸಮಿತಿ, ಸಂವಹನ ಸಮಿತಿ, ಮಾಹಿತಿ ತಂತ್ರಜ್ಞಾನ ಸಮಿತಿ, ಮನಸ್ಥಿತಿ ಸಮಿತಿ, ಇಂತಹಾ ಉಪಸಮಿತಿಗಳನ್ನು ಮಾಡಲಾಗಿದೆ.

ಇವುಗಳ ಪ್ರಮುಖ ಉದ್ದೇಶವೇ ಲಿಂಗಾನುಪಾತವನ್ನು ಸರಿದೂಗಿಸುವುದು ಮತ್ತು ಹೆಣ್ಣು ಮಕ್ಕಳ ರಕ್ಷಣೆ ಮತ್ತು ಅವರ ಶಿಕ್ಷಣದ ಮಟ್ಟವನ್ನು ವೃದ್ಧಿಸುವುದಾಗಿದೆ.ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ನಡೆದಾಗ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಸ್ಕೋ) ಪ್ರಕರಣ ದಾಖಲಿಸಿದ ಆರೋಪಿಗೆ ತ್ವರಿತವಾಗಿ ಶಿಕ್ಷೆಯಾಗುವಂತೆ ಮಾಡಬೇಕು ಮತ್ತು ಮಹಿಳೆಯರ ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕುವ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಾಗಿದೆ ಎಂದು ಆಳ್ವಾಸ್ ಕಾಲೇಜು ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಹಾಗೂ ಸಮನ್ವಯ ಸಮಿತಿಯ ಕಾರ್ಯದರ್ಶಿ ಡಾ. ಶರ್ಲಿ ಡಿ. ಬಾಬು ಹೇಳಿದರು.

ಜಿಲ್ಲೆಯಲ್ಲಿ ಲಿಂಗಾನುಪಾತ ಕಡಿಮೆ ಇರುವ ಎರಡು ಗ್ರಾಮ ಪಂಚಾಯತ್ ಮತ್ತು ಲಿಂಗಾನುಪಾತ ಹೆಚ್ಚು ಇರುವ ಎರಡು ಗ್ರಾಮ ಪಂಚಾಯತ್‍ಗಳನ್ನು ಆಯ್ಕೆ ಮಾಡಿ ಅಧ್ಯಯನಕ್ಕೆ ಒಳಪಡಿಸುವುದು ಮತ್ತು ಈ ಲಿಂಗಾನುಪಾತದ ಅಸಮತೋಲನಕ್ಕೆ ಕಾರಣಗಳೇನು ಮತ್ತು ಕಾನೂನಿನ ಅಡಿಯಲ್ಲಿ ಕ್ರಮಗಳನ್ನು ತಗೆದುಕೊಳ್ಳುವುದು ತುಂಬಾ ಅಗತ್ಯವಿದೆ ಎಂದು ಡೀಡ್ಸ್ ಸಂಸ್ಥೆ ನಿರ್ದೇಶಕರಾದ ಮಾರ್ಲಿನ್ ಮಾರ್ಟಿಸ್ ಸೂಚನೆ ನೀಡಿದರು.ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕ ಸುಂದರ ಪೂಜಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಸಿಕಂದರ್ ಪಾಶಾ, ಮಂಗಳೂರು ವಿಶ್ವವಿದ್ಯಾನಿಲಯ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಅನಿತಾ ರವಿಶಂಕರ್, ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕರಾದ ಪ್ರೋ. ಹಿಲ್ಡಾ ರಾಯಪ್ಪನ್ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group