ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ, ಆಟಿಡೊಂಜಿ ದಿನ, ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಆ .15, ಹಿಂದಿನ ಬೇಸಾಯ ಪದ್ಧತಿಗಳು ಕಣ್ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಆಟಿಡೊಂಜಿ ಕಾರ್ಯಕ್ರಮದ ಮೂಲಕ ಸಮಾಜ ಬಾಂಧವರೆಲ್ಲರೂ ಒಟ್ಟು ಸೇರಿಕೊಂಡು ಸುಖ, ದು:ಖ ಹಂಚಿಕೊಳ್ಳಲು ಸಾಧ್ಯವಾಗಿದೆ . ಆಟಿ ಆಚರಣೆ ಸಾರ್ವಜನಿಕ ಉತ್ಸವಗಳ ಮಾದರಿಯಲ್ಲಿ ಎಲ್ಲಾ ಸಮುದಾಯದವರು ಒಟ್ಟು ಸೇರಿಕೊಂಡು ಆಚರಿಸುವಂತಾಗಬೇಕೆಂದು ಒಕ್ಕಲಿಗ ಗೌಡ ಸೇವಾ ಸಂಘದ ಆಲಂಕಾರು ವಲಯದ ಉಸ್ತುವಾರಿ ತಿಮ್ಮಪ್ಪ ಗೌಡ ಕುಂಡಡ್ಕ ಹೇಳಿದರು.


ಅವರು ಒಕ್ಕಲಿಗ ಗೌಡ ಸೇವಾ ಸಂಘ ರಾಮಕುಂಜ ಮತ್ತು ಒಕ್ಕಲಿಗ ಸ್ವ-ಸಹಾಯ ಸಂಘಗಳ ಒಕ್ಕೂಟ ರಾಮಕುಂಜ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನದ ಮಹತ್ವ ಹಾಗೂ ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಸಿ ಮಾತನಾಡಿದರು.

ಆಟಿ ಆಚರಣೆ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯಗುರು ಶಿವಣ್ಣ ಗೌಡ ಬಿದಿರಾಡಿ, ಆಟಿ ತಿಂಗಳಲ್ಲಿ ಬೆಳೆಯುವ ಸಸ್ಯಗಳಲ್ಲಿ ಔಷಧೀಯ ಗುಣಗಳಿವೆ. ಆಟಿದ ಕೂಟಗಳ ಮೂಲಕವಾದರೂ ಇದರ ಬಳಕೆಯಾಗಬೇಕು. ಒಕ್ಕಲಿಗ ಗೌಡ ಸಂಘದ ವತಿಯಿಂದ ಸಮಾಜ ಬಾಂಧವರಿಗಾಗಿ ಆಟಿದ ಕೂಟ ಆಯೋಜಿಸಿ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಅಭಿರುಚಿ ಬೆಳೆಸುವ ಕಾರ್ಯ ಮಹತ್ವದಾಗಿದೆ ಎಂದರು. ಒಕ್ಕಲಿಗ ಗೌಡ ಸಂಘಟನೆಗಾಗಿ ತಾಲೂಕಿನ 68 ಗ್ರಾಮಗಳಿಗೂ ಭೇಟಿ ನೀಡಿದ್ದೇವೆ. ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಗ್ರಾಮ ಸಮಿತಿಗಳು ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಸಕ್ರೀಯವಾಗಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ತಾ.ಪಂ.ಸದಸ್ಯೆ, ಮಹಿಳಾ ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಜಯಂತಿ ಆರ್.ಗೌಡ ಮಾತನಾಡಿ, ಆಟಿ ತಿಂಗಳ ವಿಶೇಷತೆಯನ್ನು ಮಕ್ಕಳಿಗೆ ತಿಳಿಹೇಳುವ ಕೆಲಸ ಆಗಬೇಕು. ಸ್ವಸಹಾಯ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತಾಗಬೇಕು. ಇದರಿಂದ ಸಂಘಟನೆ ಮತ್ತಷ್ಟೂ ಬಲಗೊಳ್ಳಲಿದೆ ಎಂದರು.
ಒಕ್ಕಲಿಗ ಸ್ವಸಹಾಯ ಸಂಘಗಳ ಟ್ರಸ್ಟ್‌ನ ಮೇನೇಜಿಂಗ್ ಟ್ರಸ್ಟಿ ಎ.ವಿ.ನಾರಾಯಣ ಮಾತನಾಡಿದರು.

ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಸಲಹಾ ಸಮಿತಿ ಸದಸ್ಯ ಲಿಂಗಪ್ಪ ಗೌಡ ಕಡೆಂಬ್ಯಾಲು ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಒಕ್ಕಲಿಗ ಗೌಡ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲ ವಳೆಂಜ, ರಾಮಕುಂಜ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಜನಾರ್ದನ ಗೌಡ ಬಾಂತೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಕಾರ್ಯಕ್ರಮದಲ್ಲಿ ರಾಮಕುಂಜ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ರೇವತಿ ಗುಮ್ಮಣ್ಣ ಗೌಡ, ನಾಟಿವೈದ್ಯೆ ಸೀತಮ್ಮ ದೊಡ್ಡಉರ್ಕ, ಕಳೆದ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿನಿಯರಾದ ಅನನ್ಯ, ಸವಿತಾ ಬಿ.ಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

 

ರಾಮಕುಂಜ ಗ್ರಾಮದಲ್ಲಿ ರಚನೆಗೊಂಡಿರುವ 16 ಸ್ವಸಹಾಯ ಸಂಘಗಳ ಪೈಕಿ ಬಾಂತೊಟ್ಟು ಸನ್ನಿಧಿ ಒಕ್ಕಲಿಗ ಸ್ವಸಹಾಯ ಸಂಘವನ್ನು ಅತ್ಯುತ್ತಮ ಸ್ವ-ಸಹಾಯ ಸಂಘವೆಂದು ಗುರುತಿಸಿ ಗೌರವಿಸಲಾಯಿತು. ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ಮೋಹನ್ ದಾಸ್ ಎ.ಎಂಜಿರ್ ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿ ಮಾತನಾಡಿದ ನಿವೃತ್ತ ಮುಖ್ಯಶಿಕ್ಷಕಿ ರೇವತಿ, ಇದೊಂದು ಉತ್ತಮ ಕಾರ್ಯವಾಗಿದೆ. ಇನ್ನೂ ಮುಂದೆಯೂ ಸಮಾಜಬಾಂಧವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಆಗಬೇಕೆಂದು ಹೇಳಿದರು.
ರಾಮಕುಂಜ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪದ್ಮಪ್ಪ ಗೌಡ, ಪ್ರಸ್ತಾವಿಸಿ ಸ್ವಾಗತಿಸಿದರು. ಒಕ್ಕಲಿಗ ಸ್ವಸಹಾಯ ಸಂಘಗಳ ಕಾರ್ಯದರ್ಶಿ ಭಾಗೀರಥಿ ವರದಿ ಮಂಡಿಸಿದರು. ಪ್ರಕಾಶ್ ಗೌಡ ವಳೆಂಜ ವಂದಿಸಿದರು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹರೀಶ್ ಬರಮೇಲು ಕಾರ್ಯಕ್ರಮ ನಿರೂಪಿಸಿದರು.

ಸಮಾಜ ಬಾಂಧವರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಆಟಿದ ವಿಶೇಷ ಖಾದ್ಯಗಳನ್ನು ಒಳಗೊಂಡ ಸಹಭೋಜನ ನಡೆಯಿತು.

error: Content is protected !!

Join the Group

Join WhatsApp Group