(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.19.ಬಸ್ ನಿಲ್ದಾಣವನ್ನು ಜನತೆಯ ಅನೂಕೂಲಕ್ಕೆ ತಕ್ಕಂತೆ, ಸಾರ್ವಜನಿಕರ ಅಭಿಪ್ರಾಯ ಪಡೆದು ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಸೂಚಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ನಡೆದ ಸ್ಮಾರ್ಟ್ ಸಿಟಿ ಯೋಜನೆಯ 7ನೇ ನಗರ ಮಟ್ಟದ ಸಲಹಾ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ 17 ಬಸ್ ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಬಸ್ ನಿಲ್ದಾಣಗಳು ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ಉಪಯೋಗವಾಗುವುದರಿಂದ ಇನ್ನು ಮುಂದಿನ ಬಸ್ ನಿಲ್ದಾಣದ ಕಾಮಗಾರಿಯಲ್ಲಿ ಜನತೆಗೆ ಸಹಕಾರವಾಗುವಂತೆ ಡಿಸೈನ್ ನಿರ್ಮಾಣ ಮಾಡಬೇಕು ಮತ್ತು ಅತೀ ಹೆಚ್ಚು ಜನರು ತಂಗುವ ಬಸ್ ನಿಲ್ದಾಣಗಳಲ್ಲಿ ಜನರ ಅಭಿಪ್ರಾಯ ಪಡೆದು ನಿಲ್ದಾಣಕ್ಕೆ ಜೋಡಣೆಯಾಗಿ ಶೌಚಾಲಯ ನಿರ್ಮಿಸಬೇಕು ಎಂದು ಹೇಳಿದರು.
ಕೇಂದ್ರ ಮಾರುಕಟ್ಟೆಯಲ್ಲಿ ಸುಮಾರು 590 ಅಂಗಡಿ ಮುಂಗ್ಗಟ್ಟುಗಳಿದ್ದು ಸ್ವಚ್ಚತೆಯ ಕೊರತೆ ಎದ್ದು ಕಾಣುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಾತಾವರಣ ನಿರ್ಮಿಸಬೇಕು ಮತ್ತು ಸ್ವಚ್ಚತೆಯನ್ನು ಕಾಪಾಡಬೇಕು ನೂತನ ಮಾರುಕಟ್ಟೆ ನಿರ್ಮಾಣದೊಂದಿಗೆ ಜನತೆಗೆ ಹೊಸ ಅನುಭವ ಕಲ್ಪಿಸಿಕೊಡಬೇಕು ಎಂದು ಹೇಳಿದರು.ಅಭಿವೃದ್ಧಿ ಕಾಮಗಾರಿ ಪರಿಶೀಲನೆಗೆ ಕೈಗೊಂಡ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ ಮಹಾನಗರಪಾಲಿಕೆ, ಲೋಕೋಪಯೋಗಿ ಇಲಾಖೆಗಳನ್ನೊಳಗೊಂಡಂತೆ ಹಲವು ಇಲಾಖೆಗಳು ವಿವಿಧ ಏಜೆನ್ಸಿ ಮುಖಾಂತರ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುತ್ತಿದೆ.
ಸ್ಥಳೀಯ ಜನರ ಅಗತ್ಯಗಳನ್ನು ಗುರುತಿಸಿ ಕಾಮಗಾರಿಗಳಿಗೆ ಮಾನದಂಡಗಳನ್ನು ನಿಗದಿಪಡಿಸಿ ಯಾರ ಮೂಲಕ ಕಾಮಗಾರಿ ನಡೆಸುತ್ತಿರೋ ಅವರನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಮನ್ವಯದಿಂದ, ಯೋಜನಾಬದ್ಧವಾಗಿ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು ಎಂದು ನಿರ್ದೇಶನ ನೀಡಿದರು. ಪಡೀಲ್ ಮತ್ತು ಜೆಪ್ಪು ಪ್ರದೇಶದ ರೈಲ್ವೇ ಅಂಡರ್ ಪಾಸಿಂಗ್‍ನಲ್ಲಿ ನೀರು ನಿಂತು ಸಮಸ್ಯೆ ಎದುರಾಗಿತ್ತು. ಇನ್ನು ಮುಂದಕ್ಕೆ ರೈಲ್ವೇ ಅಂಡರ್ ಪಾಸಿಂಗ್ ಕಾಮಗಾರಿ ನಡೆಸುವಾಗ ಇಂತಹ ತೊಂದರೆ ಮರುಕಳಿಸದಂತೆ ಹೆಚ್ಚಿನ ನಿಗವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೇಂದ್ರ ಮಾರುಕಟ್ಟೆಯ ಅಂಗಡಿ ಮುಗ್ಗಟ್ಟಿನ ಪಟ್ಟಿ ಮಂಗಳೂರು ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಿಂದ ಪಡೆದು ಅದರ ಪ್ರಕಾರ ಮಾರುಕಟ್ಟೆಯ ಕಾಮಗಾರಿಯನ್ನು ಪ್ರಾರಂಭಿಸಿ ಎರಡಕ್ಕಿಂತ ಹೆಚ್ಚು ಅಂಗಡಿ ಹೊಂದಿರುವವರನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ಹೇಳಿದರು.ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಮಹಮ್ಮದ್ ನಝೀರ್, ರಾಹುಲ್ ಸಿಂಧ್ಯಾ ಮತ್ತು ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.