(ನ್ಯೂಸ್ ಕಡಬ) newskadaba.com ಕುಂತೂರು, ಆಗಸ್ಟ್.16.ಇಲ್ಲಿನ ಮಾರ್ ಇವಾನಿಯೋಸ್ ವಿದ್ಯಾಸಂಸ್ಥೆಗಳ ಪದವಿ ಮತ್ತು ಬಿ.ಎಡ್. ವಿಭಾಗಗಳ ವಿದ್ಯಾರ್ಥಿ ಸಂಘಗಳು ಹಾಗೂ ಭಾಷಾ ಸಂಘದ ಉದ್ಘಟನಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾರ್ ಇವಾನಿಯೋಸ್ ಆಂಗ್ಲ ಮಾದ್ಯಮ ಶಾಲೆ ಕುಂತೂರು, ಇಲ್ಲಿನ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೆಸ್ಮಿನ್ ತೆರೆಸ್ ಡಿ.ಎಂ. ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿ ಜೀವನದಲ್ಲಿ ಕಲಿಕಾ ಪ್ರಕ್ರಿಯೆಯ ಜೊತೆಯಲ್ಲಿಯೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತಾಗಲು ವಿದ್ಯಾರ್ಥಿ ಪ್ರತಿನಿಧಿಗಳಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ಇಂತಹ ವಿದ್ಯಾರ್ಥಿ ಸಂಘಗಳು ಅತ್ಯಂತ ಮಹತ್ವರವಾದುದು ಎಂಬುದಾಗಿ ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಭಿತ್ತಿ ಪತ್ರಿಕೆಯನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸುವುದರ ಮೂಲಕ ಭಾಷಾ ಸಂಘಗಳನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ವಂ/ರೆ/ಫಾ/ಡಾ/ ಎಲ್ದೋ ಪುತ್ತನ್ ಕಂಡತ್ತಿಲ್ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ನಂತರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಕುರಿತಂತೆ ತಿಳಿವಳಿಕೆ ನೀಡಿದರು. ವಿದ್ಯಾರ್ಥಿ ಸಂಘದ ಸಂಚಾಲಕ ಉಪನ್ಯಾಸಕ ಶ್ರೀ ರಾಜೇಶ್ ಉಪಾಧ್ಯಾಯ ಅವರು ಸಂಘದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಪನ್ಯಾಸಕಿ ಕುಮಾರಿ ತೃಪ್ತಿ ಶೆಟ್ಟಿ ಭಾಷಾ ಸಂಘಗಳ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಶಿಕ್ಷಣಾರ್ಥಿ ಕುಮಾರಿ ಹರಿಣಾಕ್ಷಿ.ಕೆ.ಎಸ್. ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ. ಚಂದ್ರಶೇಖರ್ ಜಿ.ಎನ್. ವೇದಿಕೆಯಲ್ಲಿ ಉಪಸ್ಧಿತರಿದ್ದರು.ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಉಷಾ. ಎಮ್.ಎಲ್ ಸ್ವಾಗತಿಸಿ, ಬಿ.ಎಡ್. ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕುಮಾರಿ ಅನುಷಾ ಜಾರ್ಜ್ ವಂದಿಸಿದರು. ಪ್ರಶಿಕ್ಷಣಾರ್ಥಿ ಕುಮಾರಿ ಸಲ್ಮಾ ಕೆ.ಎ. ಕಾರ್ಯಕ್ರಮ ನಿರೂಪಿಸಿದರು.