(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಆಗಸ್ಟ್.13.ತ್ಯಾಗ, ಬಲಿದಾನ, ಐಕ್ಯತೆಯ ಸಂಕೇತವನ್ನು ಪ್ರತಿಪಾದಿಸುವ “ಈದುಲ್ ಅಝ್”ಹಾ ಪವಿತ್ರ ಬಕ್ರೀದ್ ಹಬ್ಬದ ವಿಶೇಷ ನಮಾಜು ಮತ್ತು ಕುತುಬಾ, ಪ್ರಾರ್ಥನೆ ಗಂಡಿಬಾಗಿಲು ಜುಮಾ ಮಸೀದಿಯಲ್ಲಿ ಆ. 12ರಂದು ನಡೆಯಿತು.
ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಸೈಯ್ಯದ್ ಹಾದಿ ಅನಸ್ ತಂಙಳ್ ಹಬ್ಬದ ಸಂದೇಶ ನೀಡಿ ಮಾತನಾಡಿ ನೆಬಿವರ್ಯರ ಸಂದೇಶವನ್ನು ಸಮೀಕರಿಸುವ ಮತ್ತು ಅದನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಇಬ್ರಾಹಿಂ ನೆಬಿವರ್ಯರ ಸರಳ, ತ್ಯಾಗ ಜೀವನವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪ್ರವಾಹ ಸಂತ್ರಸ್ಥರ ಸಂಕಷ್ಠಗಳಿಗೆ ಸಹಕಾರ ನೀಡುವುದರ ಮೂಲಕ ಹಬ್ಬ ಆಚರಣೆಯಲ್ಲಿ ಸರಳತೆ ಮೈಗೂಡಿಸಿಕೊಳ್ಳಬೇಕು ಜೊತೆಗೆ ಆದ್ಯತೆಯೊಂದಿಗೆ ಕುಟುಂಬ ಬಂಧುತ್ವವನ್ನು ಆರಾಧಿಸು, ಅನ್ಯ ಧರ್ಮವನ್ನು ಗೌರವಿಸುವುದಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದರು.
ಅಲ್ಲಾಹುವಿನ ಸಂದೇಶ ಪ್ರಕಾರ ಅವರ ಕಷ್ಟದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿರುತ್ತದೆ. ಹೀಗಿರುವಾಗ ಅವರ ಕಷ್ಟಗಳನ್ನು ನಾವುಗಳು ಮುಂದಿಟ್ಟುಕೊಂಡು ಹಬ್ಬದ ಸಂಭ್ರಮದಲ್ಲಿ ವಿಲಾಸಪ್ರಿಯತೆ, ಆಡಂಭರ, ದುಂದುವೆಚ್ಚವನ್ನು ಕಡಿತ ಮಾಡಿ ಅತ್ಯಂತ ಸರಳ ರೀತಿಯಲ್ಲಿ ಹಬ್ಬ ಆಚರಣೆ ಮಾಡುವುದು ಮತ್ತು ಅವರ ಕಷ್ಟಗಳಲ್ಲಿ ಭಾಗಿಯಾಗಲು ನಮ್ಮಿಂದಾಗುವ ಸಹಾಯ ಹಸ್ತ ನೀಡಿ ಸಹಕಾರಿ ಆಗಬೇಕು ಎಂದರು. ಹಬ್ಬದ ಸಂದೇಶ ಹಂಚಿಕೊಂಡ ಮುಸ್ಲಿಂ ಬಾಂಧವರು ಬಂಧು-ಕುಟುಂಬ ಸಂಬಂಧಗಳನ್ನು ಭೇಟಿ ಮಾಡಿ ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡರು.