ಕಡಬ: ಹೋಬಳಿ ಮಟ್ಟದ ಜನ ಸಂಪರ್ಕ ಸಭೆ; ಮದ್ಯದಂಗಡಿ ಸುತ್ತಾ ಮದ್ಯಸೇವನೆ, ಸಾರ್ವಜನಿಕರಿಗೆ ತೊಂದರೆ

(ನ್ಯೂಸ್ ಕಡಬ) newskadaba.com ಕಡಬ, ಆ .15, ಇಲ್ಲಿನ ಸರಕಾರಿ ಸಾಮ್ಯದ ಮದ್ಯದಂಗಡಿ ಸುತ್ತಾ ಮದ್ಯಸೇವನೆ ಮಾಡುತ್ತಾ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಎಂ.ಎಸ್.ಐ,ಎಲ್ ನವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಪೋಲಿಸರನ್ನು ಆಗ್ರಹಿಸಿದ ಘಟನೆ ಕಡಬ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ನಡೆದಿದೆ.


ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ರವರ ಅಧ್ಯಕ್ಷತೆಯಲ್ಲಿ ನಡೆಯಿತು .ಕಡಬದ ಎಂ.ಎಸ್.ಐ.ಎಲ್ ಸುತ್ತಾ ಮುತ್ತದ ಪರಿಸರದಲ್ಲಿ ಮದ್ಯಸೇವನೆ ಮಾಡುತ್ತಿದ್ದು, ಇದರಿಂದ ಮಾಲೇಶ್ವರ, ಕೋಡಿಂಬಾಳ ಭಾಗಗಳಿಗೆ ಹೋಗುವ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ, ಸಿಕ್ಕ ಸಿಕ್ಕಲ್ಲಿ ಮದ್ಯಸೇವನೆಗೆ ಅವಕಾಶ ನೀಡಬೇಡಿ ಇದರಿಂದ ಸಂಜೆ ವೇಳೆ, ಮಹಿಳೆಯರು ಮಕ್ಕಳು ನಡೆದಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಕಡಬದಿಂದ ಅಟೋ ಬಾಡಿಗೆ ಮಾಡಿಕೊಂಡು ಬರಬೇಕಷ್ಟೆ ಎಂದು ಕಡಬ ಗ್ರಾ.ಪಂ. ಸದಸ್ಯ ಆದಂ ಕುಂಡೋಳಿ ಆರೋಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ರವರು ಎಂ.ಎಸ್.ಐ.ಎಲ್, ನಲ್ಲಿ ಮದ್ಯ ಮಾರಾಟ ಮಾತ್ರ ಮಾಡಬೇಕು ಅಲ್ಲಿ ಕುಡಿಯಲು ಬಿಡಬಾರದು ಈ ಬಗ್ಗೆ ಕ್ರಮ ಕೈಗೊಳ್ಳಲು ಪೋಲಿಸರಿಗೆ ಸೂಚನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ. ಸದಸ್ಯ ಗಣೇಶ್ ಕೈಕುರೆಯವರು, ರಸ್ತೆ ಬದಿಯಲ್ಲಿ ದಾರಿಯಲ್ಲಿ ಮದ್ಯಸೇವನೆ ಮಾಡಲು ಪೊಲೀಸರೇ ಕಾರಣ, ಅಂತವರಿಗೆ ಕೇಸು ಹಾಕಿದರೆ ಎಲ್ಲವೂ ಸರಿಯಾಗುತ್ತದೆ, ಅಲ್ಲದೆ ಎಂ.ಎಸ್.ಐ.ಎಲ್ ನ ಸಮೀಪ ಇರುವ ಅಂಗಡಿಯಲ್ಲಿ ಕುಡಿಯಲು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ, ಇದನ್ನು ಪತ್ತೆಹಚ್ಚಿ ಕೂಡಲೆ ಪೊಲೀಸರು ಕಟ್ಟು ನಿಟ್ಟಿನ ಆದೇಶ ನೀಡಬೇಕು ಎಂದು ಹೇಳಿದರು. ಬಳಿಕ ಮಾತನಾಡಿದ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಎಂ.ಎಸ್.ಐ.ಎಲ್. ಸುತ್ತಾ ಯಾರು ಮದ್ಯಸೇವನೆ ಮಾಡದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಅಲ್ಲದೆ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಮದ್ಯಸೇವನೆ ಮಾಡದಂತೆ ಎಚ್ಚರಿಕೆ ವಹಿಸಬೇಕು, ತಪ್ಪಿತಸ್ಥರ ವಿರುದ್ದ ಕಠಿನ ಕ್ರಮ ಕೈಗೊಳ್ಳುವಂತೆ ಎ.ಎಸ್.ಐ ರವಿ ಅವರಿಗೆ ಸೂಚಿಸಿದರು.

Also Read  ಕಡಬ: ಆಂಬ್ಯುಲೆನ್ಸ್ ಲೋಕಾರ್ಪಣೆ

ಅರಣ್ಯ ಇಲಾಖೆಯಿಂದ ಸರಕಾರಿ ಜಾಗ ಅತಿಕ್ರಮಣ, ತೆರವಿಗೆ ಆಗ್ರಹ
ಅರಣ್ಯ ಇಲಾಖೆಯ ಮಾಹಿತಿಯನ್ನು ಅರಣ್ಯ ರಕ್ಷಕ ರವಿಚಂದ್ರ ನೀಡುತ್ತಿದ್ದಾಗ, ಮಾತನಾಡಿದ ಕುಟ್ರುಪಾಡಿ ಗ್ರಾ.ಪಂ. ಮಾಜಿ ಸದಸ್ಯೆ ಎಲ್ಸಿ ತೋಮಸ್ರವರು ಕುಟ್ರುಪಾಡಿ ಗ್ರಾಮದಲ್ಲಿ ಸರ್ವೆ ನಂಬರ್ 189,211 ಸೇರಿದಂತೆ ಹಲವು ಸರ್ವೆ ನಂಬರಿನಲ್ಲಿ ಸರಕಾರಿ ಭೂಮಿ ಸಾಕಷ್ಟು ಇದ್ದು ಇದನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡು ಗಿಡಗಳನ್ನು ನೆಡುತ್ತಿದೆ, ಅಲ್ಲದೆ ಅರಣ್ಯ ಭೂಮಿ ಎಂದು ಹೇಳುತ್ತಿದೆ, ಇದರಿಂದ ಅಭಿವೃದ್ದಿ ಕಾರ್ಯಗಳಿಗೆ ತೊಡಕು ಉಂಟಾಗುತ್ತಿದೆ, ತಾಲೂಕು ಕೇಂದ್ರವಾಗಿರುವುದರಿಂದ ನಮಗೆ ಸಾಕಷ್ಟು ಜಾಗದ ಅವಶ್ಯಕತೆ ಇದೆ, ಈ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಸರಕಾರಿ ಜಾಗ ಇದೆಯೋ ಅದನ್ನು ಸರ್ವೆ ಮಾಡಿ ಕಂದಾಯ ಇಲಾಖೆ ಸುಪರ್ಧಿಯಲ್ಲಿಟ್ಟುಕೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಹಲವಾರು ಮಂದಿ ಗ್ರಾಮಸ್ಥರು ಧ್ವನಿಗೂಡಿಸಿದರು. ಈ ಬಗ್ಗೆ ಉತ್ತರಿಸಿದ ಪಿ.ಪಿ.ವರ್ಗೀಸ್ರವರು ಸರಕಾರಿ ಜಾಗಗಳನ್ನು ಗುರುತಿಸುವ ಕೆಲಸ ಅತೀ ಅಗತ್ಯವಾಗಿ ಆಗಬೇಕಿದೆ ಈ ಬಗ್ಗೆ ಕಂದಾಯ ಅಧಿಕಾರಿಗಳೊಂದಿಗೆ ಸಮಲೊಚನೆ ನಡೆಸಲಾಗುವುದು ಎಂದು ಹೇಳಿದರು. ಅರಣ್ಯ ಇಲಾಖೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು.

ಕಡಬ ಸಮುದಾಯ ಕೇಂದ್ರದಲ್ಲಿ ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸಬೇಕು:
ಆರೋಗ್ಯ ಇಲಾಖೆಯ ಮಾಹಿತಿಯನ್ನು ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮಣ ಗೌಡ ನೀಡುತ್ತಿದ್ದ ಸಂದರ್ಭ ಕಡಬ ಗ್ರಾ.ಪಂ. ಸದಸ್ಯ ಹನೀಫ್ ಕೆ.ಎಂ. , ಎಲ್ಸಿ ತೋಮಸ್ ಮಾತನಾಡಿ, ‍ಕಡಬ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷನ್ ಇಲ್ಲದೆ ಬಹಳ ತೊಂದರೆಯಾಗಿದೆ, ಈಗಾಗಲೇ ಡೆಂಗ್ಯೂ, ಮಲೇರಿಯ ರೋಗಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಯಾವ ಕ್ರಮ ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಲಕ್ಷ್ಮಣ ಗೌಡರವರು ಕಡಬ ಸಮುದಾಯ ಲ್ಯಾಬ್ ಟೆಕ್ಷಿಷನ್ ಓರ್ವರೆ ಇರುವುದರಿಂದ ಅವರು ರಜೆಯಲ್ಲಿ ಹೋದಾಗ ಸಮಸ್ಯೆಯಾಗಿದೆ ಅಷ್ಟೆ ಎಂದರು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಹಲವಾರು ಮಂದಿ, ಮೊದಲು ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ನಗುಮುಖದ ಸೇವೆ ನೀಡಬೇಕು, ರೋಗ ಪೀಡಿತರನ್ನು ಸತಾಯಿಸಬಾರದು ಎಂದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದಂತೆ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ರವರು ಡಿ.ಎಚ್.ಒರವರಿಗೆ ದೂರವಾಣಿ ಕರೆ ಮಾಡಿ ಲ್ಯಾಬ್ ಟೆಕ್ಷಿಷನ್ ಸಮಸ್ಯೆ ಸರಿ ಮಾಡುವಂತೆ ಹೇಳಿದರು.

Also Read  ಬಂಟ್ವಾಳ: ಮದುವೆಗೆಂದು ಬಂದ ಬಾಲಕಿಯ ಸರ ಕಳವು

ನೆಟ್ಟಣದಲ್ಲಿ ಅಕ್ರಮ ಮದ್ಯಮಾರಾಟ-ಆರೋಪ
ನೆಟ್ಟಣ ಪರಿಸರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ, ಅಲ್ಲದೆ ಕಳಪೆ ಮಟ್ಟದ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಗುಮಾನಿ ಇದೆ, ಅಲ್ಲಿನ ಗೂಡಂಗಡಿಗಳಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಬಾಲಕೃಷ್ಣ ಗೌಡ ವಾಲ್ತಾಜೆ ಹಾಗೂ ರಮೇಶ್ ವಾಲ್ತಾಜೆಯವರು ಆರೋಪ ವ್ಯಕ್ತಪಡಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಈ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಪತ್ರ ಬರೆಯುವ ಬಗ್ಗೆ ನಿರ್ಣಯಿಸಲಾಯಿತು.

ಸವಣೂರು ಮಂಜೇಶ್ವರ ರಸ್ತೆಯಲ್ಲಿ 94ಸಿಗೆ ಪಿಡಬ್ಲ್ಯೂಡಿಯಿಂದ ಅನುಮತಿ, ಕಡಬದಲ್ಲಿಯೂ ಕೊಡವಂತೆ ಆಗ್ರಹ

ಕಡಬ ಗ್ರಾ.ಪಂ. ಸದಸ್ಯ ಹನೀಫ್ ಕೆ.ಎಂ.ರವರು ಮಾತನಾಡಿ, ನಾನು ಕಳೆದ ಜನಸಂಪರ್ಕ ಸಭೆಯಲ್ಲಿ ನಾನು ವಿಷಯ ಪ್ರಸ್ತಾಪಿದ್ದೆನೆ, ಸವಣೂರು ಮಂಜೇಶ್ವರ ರಸ್ತೆಯಲ್ಲಿ 94ಸಿಗೆ ಪಿಡಿಬ್ಲ್ಯೂಡಿಯಿಂದ ನಿರಾಕ್ಷೇಪನಾ ಪತ್ರ ಸಿಕ್ಕಿದೆ, ಆದರೆ ಕಳಾರದಲ್ಲಿ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಅದೆಷ್ಟೋ ವರ್ಷಗಳಿಂದ ಮನೆಯ ಹಕ್ಕು ಪತ್ರ ಸಿಗದೆ ಒಂದು ಸೆಂಟ್ಸ್‌ ಜಾಗ ಇಲ್ಲದೆ ಒದ್ದಾಡುತ್ತಿದ್ದಾರೆ, ಆದರೆ ಲೋಕೋಪಯೋಗಿ ಇಲಾಖೆಯಿಂದ ತಾರತಮ್ಯ ಮಾಡಲಾಗಿದೆ, ಈ ಬಗ್ಗೆ ನಾನು ಕಳೆದ ಜನಸಂಪರ್ಕ ಸಭೆಯಲ್ಲಿಯೇ ಪ್ರಸ್ತಾಪ ಮಾಡಿದ್ದೆನೆ ಎಂದಾಗ ಕಂದಾಯ ಇಲಾಖೆಯವರು ಸವಣೂರು-ಮಂಜೇಶ್ವರ ರಸ್ತೆಯಲ್ಲಿ ರಸ್ತೆಯಿಂದ ಸಾಕಷ್ಟು ಜಾಗ ಇದ್ದಲ್ಲಿ ಮಾತ್ರ ಕೊಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯಿಂದ ಬಂದ ಪತ್ರವನ್ನು ಓದಲಾಯಿತು, ಈ ಉತ್ತರಕ್ಕೆ ಆಕ್ರೋಶಗೊಂಡ ಹನೀಫ್ರವರು ಮುಂದಿನ ಸಭೆಗೆ ಲೋಕೋಪಯೋಗಿ ಇಲಾಖೆಯವರು ಬರಬೇಕು, ಅವರು ಸ್ಪಷ್ಟವಾದ ಉತ್ತರ ನೀಡಬೇಕು ಎಂದು ಹೇಳಿದರು, ಇದೇ ವೇಳೆ ಲೋಕೋಪಯೋಗಿ ಇಲಾಖೆಯ ಸಿಬಂದಿಯೋರ್ವರು ಸಭೆಗೆ ಬಂದಿದ್ದು ಅವರಿಗೆ ಯಾವುದೇ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.

Also Read  ಬೈಕ್‌ ರ್ಯಾಲಿ ತಡೆದರೂ ನಾವು ಮಂಗಳೂರು ತಲುಪಿದ್ದೇವೆ ► ಮಂಗಳೂರು ಚಲೋ ಯಶಸ್ವಿಯಾಗಿದೆ: ಯಡಿಯೂರಪ್ಪ

ವಿವಿಧ ಇಲಾಖಾಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ತಾ.ಪಂ. ಸದಸ್ಯರಾದ ಲಲಿತಾ, ತಾರಾ, ವಿವಿಧ ಮೊದಲಾದವರು ಉಪಸ್ಥಿತರಿದ್ದರು.

 

error: Content is protected !!
Scroll to Top