(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.10.ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಪಾಕ್ ಕೋರಿಕೆಯನ್ನು ವಿಶ್ವಸಂಸ್ಥೆ ಹಾಗೂ ಅಮೆರಿಕ ಮತ್ತೊಮ್ಮೆ ಸಾರಾಸಗಟಾಗಿ ತಳ್ಳಿಹಾಕಿದರೆ, ಪಾಕ್ನ ಪರಮಾಪ್ತ ಚೀನಾ ಕೂಡ ಕೈಕೊಟ್ಟಿದೆ.
ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿ ಚೀನಾ ವಿವಾದದಿಂದ ಅಂತರ ಕಾಯ್ದುಕೊಂಡಿದೆ. ಕಾಶ್ಮೀರ ವಿಚಾರ ಮುಂದಿಟ್ಟುಕೊಂಡು ಚೀನಾಗೆ ತೆರಳಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿಗೆ ಆಘಾತ ಎದುರಾಗಿದೆ. ಕಾಶ್ಮೀರ ವಿಚಾರದಲ್ಲಿ ನೆರವಾಗುವಂತೆ ಪಾಕ್ ಮುಂದಿಟ್ಟ ಕೋರಿಕೆಯನ್ನು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಸ್ಪಷ್ಟವಾಗಿ ತಳ್ಳಿಹಾಕಿದ್ದು, ‘ಈ ವಿಷಯದಲ್ಲಿ ಚೀನಾ ಹಸ್ತಕ್ಷೇಪ ಮಾಡುವುದಿಲ್ಲ.
ದ್ವಿಪಕ್ಷೀಯ ಮಾತುಕತೆ ಮೂಲಕವಷ್ಟೇ ಸಮಸ್ಯೆ ಬಗೆಹರಿಸಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ.ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕಣಿವೆ ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಪಾಕಿಸ್ತಾನದ ಬತ್ತಳಿಕೆಯಲ್ಲಿದ್ದ ಪ್ರಮುಖ ಅಸ್ತ್ರವೊಂದು ಕೈತಪ್ಪಿದಂತಾಗಿದೆ.ಮಧ್ಯಸ್ಥಿಕೆ ಕೋರಿ ಪಾಕಿಸ್ತಾನ ಬರೆದಿದ್ದ ಪತ್ರಕ್ಕೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗುಟೆರೆಸ್ ಪ್ರತಿಕ್ರಿಯಿಸಿ, ‘ಶಿಮ್ಲಾ ಒಪ್ಪಂದದ ಪ್ರಕಾರ ಕಾಶ್ಮೀರ ವಿಚಾರದಲ್ಲಿ ತೃತೀಯ ವ್ಯಕ್ತಿಯ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.ಶುಕ್ರವಾರವಷ್ಟೇ ಈ ವಿಚಾರದ ಬಗ್ಗೆ ಗುಟೆರೆಸ್ನ ವಕ್ತಾರ ಸ್ಟೀಫನ್ ಗುಜಾರಿಕ್ ವಿಚಾರವಾಗಿ ಮಾತನಾಡಿದ್ದರು. ‘ಜಮ್ಮು-ಕಾಶ್ಮೀರದ ಸ್ಥಿತಿ ಬಗ್ಗೆ ಗಮನ ಇರಿಸಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ 1972ರಲ್ಲಿ ಶಿಮ್ಲಾ ಒಪ್ಪಂದವಾಗಿದ್ದು, ಈ ವಿಚಾರದಲ್ಲಿ ಮೂರನೆಯವರ ಮಧ್ಯಸ್ಥಿಕೆಗೆ ಅವಕಾಶವಿಲ್ಲ. ಆದರೆ ಈ ವಿಚಾರದ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡರೂ ಶಾಂತಿಪೂರ್ಣವಾಗಿರಬೇಕು’ ಎಂದಿದ್ದರು. ಕೆಲ ದಿನಗಳ ಹಿಂದಷ್ಟೇ ಕಾಶ್ಮೀರ ವಿಚಾರದಲ್ಲಿ ಪಾಕ್ ಮತ್ತು ಭಾರತದ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದ ಅಮೆರಿಕದ ನಡೆ ಬದಲಾಗಿದೆ. ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ಮಾರ್ಗನ್ ಆರ್ಟ್ಗಸ್, ಇವೆರಡೂ ದೇಶಗಳ ಜತೆಗೆ ಅಮೆರಿಕ ಉತ್ತಮ ಬಾಂಧವ್ಯ ಹೊಂದಿದೆ. ಹೀಗಾಗಿ ಈ ಸಮಸ್ಯೆಯನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಪರಿಹರಿಸಿಕೊಳ್ಳುವುದೇ ಉತ್ತಮ’ ಎಂದು ಹೇಳಿದ್ದಾರೆ.