(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ವಲಸೆ ಕಾರ್ಮಿಕರ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳು ರೋಟಾ ವೈರಸ್ ಲಸಿಕೆಯಿಂದ ವಂಚಿತರಾಗದಂತೆ ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರೋಟಾ ವೈರಸ್ ಲಸಿಕೆ ಮತ್ತು ಟಿಡಿ ಪರಿಚಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದರು. ಮಕ್ಕಳಲ್ಲಿ ಅತಿಸಾರ ಬೇಧಿ ಉಂಟು ಮಾಡುವ ರೋಟಾ ವೈರಸ್ ನಿಯಂತ್ರಣಕ್ಕಾಗಿ ಮಕ್ಕಳಿಗೆ ಆರನೇ, ಹತ್ತನೇ, ಹದಿನಾಲ್ಕನೇ ವಾರದಲ್ಲಿ ತಪ್ಪದೇ ರೋಟಾ ವೈರಸ್ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ಪ್ರತೀ ಮಗುವಿಗೂ ನೀಡಬೇಕು. ಈ ಲಸಿಕೆಯ ಸದುಪಯೋಗ ಸಿಗುವಂತೆ ಕಾರ್ಯನಿರ್ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ರೋಟಾ ವೈರಸ್‍ನಿಂದ ಉಂಟಾಗುವ ಪರಿಣಾಮಗಳ ಹಾಗೂ ಲಸಿಕೆ ನೀಡುವುದರ ಕುರಿತು ಆರೋಗ್ಯ ಇಲಾಖೆಯು ಆಶಾ ಕಾರ್ಯಕರ್ತೆಯರಿಗೆ ಹಾಗೂ ಇತರ ಸಿಬ್ಬಂಧಿಗಳಿಗೆ ಅಗತ್ಯ ತರಬೇತಿ ನೀಡಬೇಕು. ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಬೇಕು ಮತ್ತು ಗ್ರಾಮ ಪಂಚಾಯತ್‍ಗಳ ಗ್ರಾಮ ಸಭೆಗಳಲ್ಲಿ ರೋಟಾ ವೈರಸ್ ಮತ್ತು ಟಿಡಿ ಲಸಿಕೆಗಳ ಕುರಿತು ಅರಿವು ಮೂಡಿಸಬೇಕೆಂದು ಅವರು ಹೇಳಿದರು.ಡಾ. ಸತೀಶ್‍ಚಂದ್ರ ರೋಟಾ ಲಸಿಕೆ ಮತ್ತು ಟಿಡಿ ಲಸಿಕೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ.ರಾಮಕೃಷ್ಣ ರಾವ್, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.