(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ಕುಟ್ರುಪಾಡಿ ಗ್ರಾಮದ ಉಳಿಪ್ಪು ಎಂಬಲ್ಲಿ ರಸ್ತೆ ದುರಸ್ತಿ ವಿಚಾರದಲ್ಲಿ ಆ.9ರಂದು ಕುಟ್ರುಪಾಡಿ ಪಂಚಾಯತ್ ಎದುರು ಎಲ್ಸಿತೋಮಸ್ ಎಂಬವರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಹಿನ್ನಲೆಯಲ್ಲಿ ಕುಟ್ರುಪಾಡಿ ಗ್ರಾ.ಪಂ.ನಲ್ಲಿ ತುರ್ತು ಸಭೆಯಲ್ಲಿ ಚರ್ಚೆ ನಡೆಸಿ, ರಸ್ತೆಯ ದುರಸ್ತಿಗೆ ನ್ಯಾಯಾಲಯದ ಆದೇಶ ಮತ್ತು ಪಟ್ಟಾ ಜಾಗದವರ ಆಕ್ಷೇಪಣೆ ಅರ್ಜಿ ಅಡ್ಡಿಯುಂಟಾಗಿರುವುದರಿಂದ ತುರ್ತು ದುರಸ್ತಿ ಸಾಧ್ಯವಾಗುವುದಿಲ್ಲ, ಈ ವಿಚಾರವನ್ನು ಎಲ್ಸಿ ತೋಮಸ್ ಅವರು ಅರ್ಥ ಮಾಡಿಕೊಂಡು ಪಂಚಾಯತ್ ವಿರುದ್ದ ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಕೈ ಬಿಡಬೇಕೆಂದು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ.ಕೆ. ಗೋಗಟೆ ಪಂಚಾಯತ್ ಆಡಳಿತ ಮಂಡಳಿಯ ಪರವಾಗಿ ಮನವಿ ಮಾಡಿಕೊಂಡಿದ್ದಾರೆ.ಉಳಿಪ್ಪು-ಮಜ್ಜಾರು ರಸ್ತೆಯಲ್ಲಿ ಬನಾರಿ ಎಂಬಲ್ಲಿ ರಸ್ತೆ ಬದಿ ಕುಸಿದು ಬಿದ್ದು ಸಂಚಾರಕ್ಕೆ ತೊಡಕು ಉಂಟಾಗಿದೆ. ಈ ಬಗ್ಗೆ ಎಲ್ಸಿ ತೋಮಸ್ ಎಂಬವರು ಕಳೆದ ಕುಟ್ರುಪಾಡಿ ಗ್ರಾಮ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ.9ರಂದು ಪಂಚಾಯತ್ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಆ ಹಿನ್ನಲೆಯಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರಸ್ತೆ ದುರಸ್ತಿ ಮಾಡಲು ಆ ರಸ್ತೆ ಹಾದು ಹೋಗುವ ಪಟ್ಟಾ ಜಾಗದವರಾದ ಶ್ರೀಮತಿ ಆಲ್ಪೋನ್ಸ ಎಂಬವರು ನ್ಯಾಯಲಯದಲ್ಲಿ ಎಲ್ಸಿ ತೋಮಸ್ ಹಾಗೂ ಇತರರ ವಿರುದ್ದ ದಾವೆ ಹೂಡಿದ್ದು, ಆ ರಸ್ತೆಯಲ್ಲಿ ಎಲ್ಸಿ ತೋಮಸ್ ಅವರಿಗೆ ಹಕ್ಕು ಇಲ್ಲ ಎಂದು ನ್ಯಾಯಾಲಯ ಈ ಹಿಂದೆ ಆದೇಶ ನೀಡಿರುವುದು ಅಲ್ಲದೆ ಪಂಚಾಯತ್ ಅಲ್ಲಿ ಕಾಮಗಾರಿ ನಡೆಸದಂತೆ ಆಲ್ಪೋನ್ಸ ಅವರು ಪಂಚಾಯತ್‍ಗೆ ಆಕ್ಷೇಪಣೆ ಅರ್ಜಿ ನೀಡಿದ್ದಾರೆ. ಆದುದರಿಂದ ಮುಂದಿನ ಕ್ರಮದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಆದೇಶದ ಬಳಿಕ ಮುಂದುವರಿಯಲಾಗುವುದು ಎಂದು ಪಂಚಾಯತ್ ಆಡಳಿತ ಮಂಡಳಿ ತುರ್ತು ಸಭೆಯಲ್ಲಿ ತಿರ್ಮಾನಿಸಿದೆ. ತುರ್ತು ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಆನಂದ ಪೂಜಾರಿ ಅಲಾರ್ಮೆ, ಸದಸ್ಯರಾದ ದೇವಯ್ಯ ಗೌಡ ಪನ್ಯಾಡಿ, ಶಿವಪ್ರಸಾದ್ ಪುತ್ತಿಲ, ಆಲಿ ಯಾನೆ ಮಹಮ್ಮದಾಲಿ, ಜಾನಕಿ ಪಟ್ಟೆ, ಜಾನಕಿ ಕುಂಟೋಡಿ, ತನಿಯ ಸಂಪಡ್ಕ, ಬಿನೋಜ್ ವರ್ಗಿಸ್, ಲಿಂಗಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನೆ ಕೈ ಬಿಡುವಂತೆ ಮನವಿ:
ರಸ್ತೆಯ ದುರಸ್ತಿಯ ವಿಚಾರವಾಗಿ ಎಲ್ಸಿ ತೋಮಸ್ ಅವರು ಪಂಚಾಯತ್ ವಿರುದ್ದ ಪ್ರತಿಭಟನೆ ಮಾಡುವುದು ಸರಿಯಲ್ಲ, ನಾವು ರಸ್ತೆ ದುರಸ್ತಿಗೆ ನಮ್ಮ ಆಕ್ಷೇಪಣೆ ಏನು ಇಲ್ಲ, ನ್ಯಾಯಾಲಯದ ಆದೇಶ ಮತ್ತು ರಸ್ತೆ ಹಾದು ಹೋಗುವ ಪಟ್ಟಾದಾರರ ಆಕ್ಷೇಪಣೆ ಇರುವುದರಿಂದ ತುರ್ತು ದುರಸ್ತಿ ಸಾಧ್ಯವಿಲ್ಲ, ಈ ವಿಚಾರಗಳು ಗೊತ್ತಿದ್ದು ಎಲ್ಸಿ ತೋಮಸ್ ಅವರು ಪಂಚಾಯತ್ ವಿರುದ್ದ ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ, ಅವರು ಕೂಡಲೇ ಪ್ರತಿಭಟನೆ ಹಿಂತೆಗೆದುಕೊಂಡು ಸಹಕರಿಸಬೇಕು ಎಂದು ಪಂಚಾಯತ್ ಅಧ್ಯಕ್ಷೆ ವಿದ್ಯಾ.ಕೆ.ಗೋಗಟೆ ಹೇಳಿದ್ದಾರೆ.