(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ಸಾರ್ವಜನಿಕರ ಹಿತದೃಷ್ಠಿಯಿಂದ ಉತ್ತಮ ಗುಣಮಟ್ಟದ ಆರೋಗ್ಯ ಪಾಲನೆಗೆ ಉತ್ತೇಜನ ನೀಡುವುದು ಮತ್ತು ವೈದ್ಯ ಧರ್ಮದ ತತ್ವಗಳನುಸಾರವಾಗಿ ಮೇಲ್ವಿಚಾರಣೆ ಮಾಡಲು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.
ಖಾಸಗಿ ವೈದ್ಯಕೀಯ ಸಂಸ್ಥೆಗಳು ಒದಗಿಸಬೇಕಾದ ಸೇವೆಯ ಗುಣಮಟ್ಟಗಳನ್ನು ನಿಗದಿಪಡಿಸುವ ಮೂಲಕ ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ವ್ಯವಹಾರವನ್ನು ಕಾನೂನಿನ ಮೂಲಕ ನಿಯಂತ್ರಿಸಿ ಮೇಲ್ವಿಚಾರಣೆ ಮಾಡಲು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಹಾಗೂ ನಿಯಮಗಳು 2009 ಕೆ.ಪಿ.ಎಂ.ಇ (ತಿದ್ದುಪಡಿ) ಅಧಿನಿಯಮ ಹಾಗೂ ನಿಯಮಗಳು 2018ನ್ನು ಸರ್ಕಾರವು ಜಾರಿಗೆ ತಂದಿದೆ. ಅದರಂತೆ ಖಾಸಗಿ ಆಸ್ಪತ್ರೆಗಳನ್ನು ನೋಂದಣಿ ಮತ್ತು ನವೀಕರಣ ಮಾಡುವ ಕಾರ್ಯವು ಜಾರಿಯಲ್ಲಿರುತ್ತದೆ.
ಆದುದರಿಂದ ಕೆ.ಪಿ.ಎಂ.ಇ (ತಿದ್ದುಪಡಿ) ಅಧಿನಿಯಮ ಹಾಗೂ ನಿಯಮಗಳು 2018ನ್ನು ಅನುಷ್ಟಾನಗೊಳಿಸಿ ವೃದ್ಧಿಪಡಿಸಲು ಪಿ.ಸಿ.ಪಿ.ಎನ್.ಡಿ.ಟಿ ಯ ಕಾರ್ಯಕ್ರಮದ ಜೊತೆಗೆ ಕೆ.ಪಿ.ಎಂ.ಇ ಕಾರ್ಯಕ್ರಮಗಳಿಗೆ ನೋಡಲ್ ಅಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ. ಸಿಖಂದರ್ ಪಾಶಾ ಅವರನ್ನು ನೇಮಿಸಲಾಗಿದೆ. ಸಾರ್ವಜನಿಕರು ಆಸ್ಪತ್ರೆ ಹಾಗೂ ವೈದ್ಯರ ಸೇವೆಗೆ ಸಂಬಂದಿಸಿದಂತೆ ಯಾವುದೇ ಅಹವಾಲುಗಳಿಗೆ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.