(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆಗಸ್ಟ್.7.ಉಪ್ಪಿನಂಗಡಿಯಲ್ಲಿ ಆ. 6ರಿಂದ ಭಾರೀ ಮಳೆಯಿಂದಾಗಿ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ನಿಚ್ಚಳವಾಗಿದೆ.
ನೇತ್ರಾವತಿ ನದಿಯ ನೀರಿನ ಮಟ್ಟ 24 ಮೀಟರ್‌ಗೇರಿದೆ. ಕುಮಾರಧಾರಾ ನದಿಯಲ್ಲೂ ನೀರು ರಭಸವಾಗಿ ಹರಿಯುತ್ತಿದೆ. ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಹರಿವಿಗೆ ತಡೆಯಾಗುತ್ತಿದೆ. ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ನಸುಕಿನ ಜಾವ ಮೂರು ಗಂಟೆಗೆ 6 ಮೆಟ್ಟಿಲುಗಳು ಮಾತ್ರ ಕಾಣುತ್ತಿದ್ದವು. ಆ ಬಳಿಕ ನೀರಿನ ಮಟ್ಟ ಕಡಿಮೆಯಾಗಿ 14 ಮೆಟ್ಟಿಲು ಗೋಚರಿಸಿದವು.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಮತ್ತೆ ನೀರಿನ ಮಟ್ಟ ಏರಿ, 7 ಮೆಟ್ಟಿಲುಗಳಷ್ಟೇ ಕಾಣುತ್ತಿದ್ದವು. ಇವು ಮುಳುಗಿದರೆ ನದಿ ನೀರು ದೇವಾಲಯದ ಆವರಣವನ್ನು ಪ್ರವೇಶಿಸುತ್ತದೆ.ತುರ್ತು ಕಾರ್ಯಾಚರಣೆಗಾಗಿ ತಂಡ ಸನ್ನದ್ಧವಾಗಿದ್ದು, ದೇವಾಲಯದ ಬಳಿ ಬೀಡು ಬಿಟ್ಟಿರುವ ಈ ತಂಡ 24 ಗಂಟೆ ಕಾರ್ಯ ನಿರ್ವಹಿಸಲಿದೆ.ಎಂದು ನೋಡಲ್ ಅಧಿಕಾರಿಗಳು, ಕಂದಾಯ ಇಲಾಖಾಧಿಕಾರಿಗಳು ಕ್ಷಣ ಕ್ಷಣದ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡುತ್ತಿದ್ದಾರೆ.