ರಸ್ತೆ ಅಭಿವೃದ್ಧಿಗೆ ಜಾಗ ಬಿಟ್ಟುಕೊಡದಿದ್ದರೆ ಭೂಸ್ವಾಧೀನ ➤ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.6.ಮಂಗಳೂರು ನಗರದಲ್ಲಿ ಹಲವಾರು ಪ್ರಮುಖ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳು ಕೆಲವು ಖಾಸಗೀ ಜಾಗದ ತಕರಾರಿನಿಂದ ಅಪೂರ್ಣಗೊಂಡಿದ್ದು, ಕೂಡಲೇ ಸಮಸ್ಯೆ ಬಗೆಹರಿಸಿ ಇಂತಹ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನಿರ್ದೇಶಿಸಿದ್ದಾರೆ.


ಅವರು ಸೋಮವಾರ ತಮ್ಮ ಕಚೇರಿಯಲ್ಲಿ ನಡೆದ ಸ್ಮಾರ್ಟ್‍ಸಿಟಿ ಅಂತರ್ ಇಲಾಖಾ ಕ್ರಿಯಾಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಂಗಳೂರು ನಗರದ ಭವಿಷ್ಯದ ದೃಷ್ಠಿಯಿಂದ ಪ್ರಮುಖ ರಸ್ತೆಗಳ ಅಗಲೀಕರಣವಾಗಬೇಕಾಗಿದೆ. ನಗರದಲ್ಲಿ ಹಲವು ಪ್ರಮುಖ ರಸ್ತೆಗಳ ಅಗಲೀಕರಣ, ಫುಟ್ ಪಾತ್ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೆಲವು ವರ್ಷಗಳ ಹಿಂದೆಯೇ ಕೈಗೆತ್ತಿಕೊಳ್ಳಲಾಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ರಸ್ತೆ ಅಭಿವೃದ್ಧಿಗೆ ಜಾಗ ಬಿಟ್ಟುಕೊಡಲು ಕೆಲವು ಖಾಸಗೀ ವ್ಯಕ್ತಿಗಳು ನಿರಾಕರಿಸಿರುವುದೇ ಇದಕ್ಕೆ ಕಾರಣ. ಆದರೆ, ನಂತರ ಮಹಾನಗರಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ರಸ್ತೆ ಅಭಿವೃದ್ಧಿ ಅಪೂರ್ಣವಾಗಿಯೇ ಉಳಿಯುವಂತಾಗಿದೆ.

ಸಾರ್ವಜನಿಕ ಉದ್ದೇಶಕ್ಕೆ ಜಾಗ ಪಡೆಯಲು ಭೂಸ್ವಾಧೀನ ಕಾಯಿದೆಯಲ್ಲಿ ಅವಕಾಶ ಇದ್ದರೂ, ಇದಕ್ಕೂ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಒಂದಿಬ್ಬರ ತಕರಾರಿಗೆ ಇಡೀ ರಸ್ತೆಯ ಅಭಿವೃದ್ಧಿಯನ್ನು ನಿಲ್ಲಿಸಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ರಸ್ತೆ ಅಗಲೀಕರಣಕ್ಕೆ ಖಾಸಗೀ ಜಾಗ ಅಗತ್ಯವಿದ್ದಲ್ಲಿ ಭೂಮಾಲೀಕಗೆ ಟಿ.ಡಿ.ಆರ್. ಒದಗಿಸುವ ಮೂಲಕ ಜಾಗ ಪಡೆಯಬೇಕು. ಇದಕ್ಕೆ ನಿರಾಕರಿಸಿದರೆ, ಅಂತಹ ಜಾಗವನ್ನು ಭೂಸ್ವಾಧೀನ ಕಾಯಿದೆಯಡಿ ವಶಪಡಿಸಲು ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಜಾಗದ ತಕರಾರಿನಿಂದ ಅರ್ಧದಲ್ಲಿ ನಿಂತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ, ಜಮೀನನ್ನು ಪಡೆಯಲು ಕಂದಾಯ ಇಲಾಖೆ, ಮಹಾನಗರಪಾಲಿಕೆ ಹಾಗೂ ನಗರ ಯೋಜನೆ ಇಲಾಖೆ ಅಧಿಕಾರಿಗಳ ಸಮಿತಿಯನ್ನು ಇದೇ ಸಂದರ್ಭದಲ್ಲಿ ರಚಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರು.

Also Read  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ➤ ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನಾ ಕಾರ್ಯಕ್ರಮ

ಸಾರ್ವಜನಿಕ ಹಿತದೃಷ್ಠಿಯಿಂದ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ತಿಳಿಸಿದರು.ಟಿ.ಡಿ.ಆರ್. ಮೂಲಕ ಜಮೀನು ಪಡೆಯುವ ಸಂದರ್ಭದಲ್ಲಿ ಟ.ಡಿ.ಆರ್. ನೀಡಲು ವಿಳಂಭವಾಗುವುದನ್ನು ತಪ್ಪಿಸಲು ಪ್ರತ್ಯೇಕ ಟಿ.ಡಿ.ಆರ್. ವಿಭಾಗವನ್ನು ತೆರೆದು ಎಲ್ಲಾ ವ್ಯವಸ್ಥೆಗಳನ್ನು ಒಂದೇ ಕಡೆ ದೊರಕಿಸಲು ಸಸಿಕಾಂತ್ ಸೆಂಥಿಲ್ ತಿಳಿಸಿದರು.ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ, ರಸ್ತೆ ಅಗಲೀಕರಣ ಸಂದರ್ಭದಲ್ಲಿ ಬಹುತೇಕ ಜಾಗದ ಮಾಲೀಕರು ಬಿಟ್ಟುಕೊಡಲು ಸಿದ್ದರಿರುತ್ತಾರೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಇಂತಹ ಸಮಸ್ಯೆ ಇದೆ. ಟಿಡಿಆರ್ ಮೂಲಕ ಜಾಗ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಪಾದಚಾರಿ ಮಾರ್ಗ: ನಗರದ ಟೌನ್ ಹಾಲ್ ಬಳಿ ಪಾದಚಾರಿಗಳಿಗೆ ರಸ್ತೆ ದಾಟಲು ಕೆಳ ಸೇತುವೆ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಬೇಕು. ಇದಕ್ಕೆ ಹೆಚ್ಚುವರಿಯಾಗಿ ತಾಲೂಕು ಪಂಚಾಯತ್ ಜಮೀನು ಪಡೆಯುವ ಸಂಬಂಧ ತಾ.ಪಂ. ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಚರ್ಚಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.ಪುರಭವನ ವೃತ್ತದಿಂದ ಆರ್.ಟಿ.ಓ. ವರೆಗೆ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಪರಿವರ್ತಿಸುವ ಚಿಂತನೆಯನ್ನು ಪುನರ್ ಅಧ್ಯಯನ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಲಾಲ್‍ಬಾಗ್ ವೃತ್ತದ ಅಭಿವೃದ್ಧಿಯನ್ನು ರಸ್ತೆ ಸಂಚಾರದ ಮಾರ್ಗದರ್ಶಿಯಂತೆ ಕೈಗೆತ್ತಿಕೊಳ್ಳಲು ಹಾಗೂ ಲೇಡಿಹಿಲ್ ವೃತ್ತ ಅಭಿವೃದ್ಧಿಯನ್ನು ವಿಳಂಭವಿಲ್ಲದೇ ನಡೆಸಲು ತಿಳಿಸಿದರು.

Also Read  ಈಶ್ವರಮಂಗಲ: ತೋಟದ ಕಣಿವೆಗೆ ಬಿದ್ದ ಕಾಡುಕೋಣ

ಓಲ್ಡ್ ಕೆಂಟ್ ರಸ್ತೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆಯೊಂದಿಗೆ ಕೂಡಲೇ ಚರ್ಚಿಸಲು ಅವರು ಸೂಚಿಸಿದರು.ರೈಲ್ವೇ ಇಲಾಖೆಯ ಜಮೀನಿನಿಂದಾಗಿ ಬಾಕಿ ಉಳಿದಿರುವ ರಸ್ತೆ ಅಭಿವೃದ್ಧಿ, ಸ್ಮಾರ್ಟ್ ರಸ್ತೆ ಹಾಗೂ ಡ್ರೈನೇಜ್ ವ್ಯವಸ್ಥೆಗಳ ಕಾಮಗಾರಿಗಳನ್ನು ಮುಂದುವರಿಸಲು ಈ ವಾರದಲ್ಲೇ ರೈಲ್ವೇ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಅಂಗರಗುಂಡಿ, ಕುಡುಂಬೂರು ಡ್ರೈನೇಜ್ ವ್ಯವಸ್ಥೆ: ಬೈಕಂಪಾಡಿ ವಾರ್ಡಿನ ಅಂಗರಗುಂಡಿ ಹಾಗೂ ಕುಡುಂಬೂರು ಪ್ರದೇಶಕ್ಕೆ ಒಳಚರಂಡಿ ಡ್ರೈನೇಜ್ ವ್ಯವಸ್ಥೆ ಕಾಮಗಾರಿಯನ್ನು ಕೆ.ಯು.ಐ.ಡಿ.ಎಫ್.ಸಿ. ಮೂಲಕ ನಡೆಸಲಾಗುತ್ತದೆ. ಇದಕ್ಕಾಗಿ ವೆಟ್ ವೆಲ್ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಕೆ.ಐ.ಎ.ಡಿ.ಬಿ. ವಶದಲ್ಲಿರುವ ಭೂಮಿ ಅಗತ್ಯವಿದೆ. ಈಗಾಗಲೇ ಜಮೀನು ಪಡೆಯುವ ಸಂಬಂಧ ಕೆ.ಐ.ಎ.ಡಿ.ಬಿ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೆ.ಯು.ಐ.ಡಿ.ಎಫ್.ಸಿ. ಅಧಿಕಾರಿಗಳು ಸಭೆಗೆ ತಿಳಿಸಿದರು. ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಂಡು, ಡ್ರೈನೇಜ್ ಕಾಮಗಾರಿ ಕೈಗೆತ್ತಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸುವ್ಯವಸ್ಥಿತವಾಗಿ ಕಾಮಗಾರಿ ನಡೆಸಿ: ನಗರದ ಹಲವೆಡೆ ಸಾರ್ವಜನಿಕ ಕಾಮಗಾರಿಗಳನ್ನು ನಡೆಸುವಾಗ ಗುತ್ತಿಗೆದಾರರು ಯಾವುದೇ ರೀತಿಯ ಸುರಕ್ಷತಾ ವ್ಯವಸ್ಥೆ ಅಳವಡಿಸಿದೆ, ಮನಬಂದಂತೆ ಕಾಮಗಾರಿಗಳನ್ನು ನಡೆಸುತ್ತಿರುವುದು ಕಂಡುಬರುತ್ತಿದೆ. ಕಾಮಗಾರಿ ಸ್ಥಳದಲ್ಲಿ ಅಗತ್ಯ ಬ್ಯಾರಿಕೇಡ್, ಬೋರ್ಡ್ ಮತ್ತು ರಿಫ್ಲೆಕ್ಟರ್‍ಗಳನ್ನು ಅಳವಡಿಸಬೇಕು. ರಸ್ತೆ ಕಟ್ ಮಾಡುವಾಗಲೂ ಯಾವುದೇ ಸುರಕ್ಷತೆ ಪಾಲಿಸುತ್ತಿಲ್ಲ. ಇಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.ಸಭೆಯಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ನಾರಾಯಣಪ್ಪ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Also Read  ಕಂಬಳಬೆಟ್ಟು ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಮಿತ್ತೂರು ನೌರತುಲ್ ಮದೀನಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆ ‘ಸಮಗ್ರ ಪ್ರಶಸ್ತಿ’

error: Content is protected !!
Scroll to Top