(ನ್ಯೂಸ್ ಕಡಬ) newskadaba.com ನವದೆಹಲಿ, ಆಗಸ್ಟ್.2.ಸಂಸದ ಶ್ರೀ.ನಳಿನ್ ಕುಮಾರ್ ಕಟೀಲ್ ಇವರು ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಹರ್ಷವರ್ಧನ್ ಇವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಮಂಗಳೂರಿಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.
ಮಂಗಳೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವುದರಿಂದ ಕರಾವಳಿ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ಸಿಗುತ್ತದೆ ಅಲ್ಲದೇ ರಾಜ್ಯದ ಕರಾವಳಿ ಜಿಲ್ಲೆಗಳ ಜನಸಾಮಾನ್ಯರಿಗೆ ಇಂತಹ ಆಸ್ಪತ್ರೆಯಿಂದ ಕೈಗೆಟುಕುವ ಶುಲ್ಕದಲ್ಲಿ ಉತ್ತಮ ಚಿಕಿತ್ಸೆಯನ್ನು ಪಡೆಯಲು ಅನುಕೂಲವಾಗಲಿದೆ ಎಂದು ಸಂಸದರು ಸಚಿವರಿಗೆ ಮನವರಿಕೆ ಮಾಡಿದರು.ಇದಲ್ಲದೇ ಸೆಪ್ಟೆಂಬರ್ 14, 2019 ರಂದು ಮಂಗಳೂರಿನಲ್ಲಿ ಭಾರತ್ ವಿಕಾಸ್ ಪರಿಷತ್ ಮಂಗಳೂರು ಇದರ ವತಿಯಿಂದ ನಡೆಯಲಿರುವ “ಗುರು ವಂದನಾ ಛಾತ್ರ ಅಭಿನಂದನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಮನವಿಮಾಡಿದರು.
ಹಾಗೂ ಅಕ್ಟೋಬರ್ 7, 2019 ರಂದು ಮಂಗಳೂರು ತಾಲೂಕಿನ ಕಟೀಲಿನಲ್ಲಿ ನೂತವಾಗಿ ನಿರ್ಮಿಸಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ನಡೆಸಲ್ಪಡುವ ಆಸ್ಪತ್ರೆಯ ಉದ್ಘಾಟನೆಯನ್ನು ನೆರವೇರಿಸುವಂತೆ ಮತ್ತು ಅಕ್ಟೋಬರ್ 5 ಅಥವ 7 ರಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ ಕ್ಯಾಂಪಸ್ ಗೆ ಭೇಟಿ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂಧಿಸಿದ ಸಚಿವರು ಸೆಪ್ಟಂಬರ್ ತಿಂಗಳಿನಲ್ಲಿ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.