(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆಗಸ್ಟ್.1.ಬೆಥನಿ ಆಶ್ರಮಕ್ಕೆ ಇಂದು ನೂರರ ಸಂಭ್ರಮ, ಶಾಲೆ, ಕಾಲೇಜು, ಐಟಿಐ ಸೇರಿದಂತೆ ಬೆಥನಿಯ ಸಂಸ್ಥೆಗಳು ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರಿಗೂ ಸಮಾನತೆಯ, ಮಾನವೀತೆಯ, ಸಂದೇಶ ಸಾರುವ ಭಾರತೀಯ ಸಂಸ್ಕೃತಿ ಬೆಳೆಸುವ ಮೌಲ್ಯಯುತ ಶಿಕ್ಷಣ ಕೇಂದ್ರಗಳಾಗಿರುವುದು ದೇವರ ಕೃಪೆ , ದೇವದಾಸ ಮಹಾಧರ್ಮಾಧ್ಯಕ್ಷ ಮಾರ್ ಈವಾನಿಯೋಸರ ಕನಸು.
ಇಂದು ಕಡಬ ತಾಲೂಕಿನ ,ಕರ್ನಾಟಕ ಸರಕಾರದ ,ಭಾರತ ದೇಶದ ಶ್ರೇಯೋಭಿವೃದ್ಧಿಯಲ್ಲಿ ಸಮಸ್ತ ನಾಡಿನ ಜನತೆಯೊಂದಿಗೆ ಬೆಥನಿ ಸಂಸ್ಥೆ ಕೈಜೋಡಿಸುತ್ತಿದೆ ಎಂದರೆ ತಪ್ಪಾಗಲಾರದು. ಇಂತಹ ಸಂಸ್ಥೆಯ ಕೆಲಸ ಕಾರ್ಯಗಳಿಂದ ಊರಿನ ಅಭಿವೃದ್ಧಿ ಸಾಧ್ಯ ಎಂದು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಪುತ್ತೂರು ಧರ್ಮಪ್ರಾಂತ್ಯದ ಅತಿ ವಂದನೀಯ ಬಿಷಪ್ ಗೀರ್ವಗೀಸ್ ಮಕ್ಕಾರಿಯೋಸ್ ನುಡಿದರು. ಅವರು ಜ್ಞಾನೋದಯ ಬೆಥನಿ ಪಿ.ಯು. ಕಾಲೇಜು ನೆಲ್ಯಾಡಿ ಇದರ ಸಿಲ್ವರ್ ಜೂಬಿಲಿ ಹಾಲ್‍ನಲ್ಲಿ ನಡೆದ ಬೆಥನಿ ಆಶ್ರಮದ ಶತಮನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬೆಥನಿಯ ಸ್ಥಾಪಕರಾದ ದೇವದಾಸ ಮಹಾಧರ್ಮಾಧ್ಯಕ್ಷ ಮಾರ್ ಈವಾನಿಯೋಸರ ಛಾಯಾಚಿತ್ರದ ಮುಂದೆ ದೀಪ ಹಚ್ಚಿ ಗೌರವಿಸಿದರು. ಬೆಥನಿ ಆಶ್ರಮದ ವತಿಯಿಂದ ನಡೆಯಲ್ಪಡುವ ಎಲ್ಲಾ ವಿದ್ಯಾ ಸಂಸ್ಥೆಗಳು ಯಾವುದೇ ಜಾತಿ, ಮತ, ಭೇದವಿಲ್ಲದೆ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ರಾರಾಜಿಸುತ್ತಿದೆ. ಇನ್ನೂ ಉನ್ನತ ಮಟ್ಟಕ್ಕೆ ಏರಲಿ ಎಂದು ಶುಭ ನುಡಿದರು.
ಈ ಸಂದರ್ಭದಲ್ಲಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಸ್ಥಾಪಕ ಗುರುಗಳು ಹಾಗೂ ಪ್ರಾಂಶುಪಾಲರೂ ಆದ ರೆ|ಫಾ| ಸಕ್ಕರಿಯಾಸ್ ನಂದಿಯಾಟ್ ಅವರನ್ನು ಶಾಲು ಹೊದಿಸಿ ಫಲಪುಷ್ಪಗಳಿತ್ತು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ರೆ|ಡಾ|ಫಾ| ವರ್ಗೀಸ್ ಕೈಪನಡುಕ್ಕ, ರೆ|ಫಾ| ಐಸಕ್ ಸ್ಯಾಂ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರು ಹಾಗೂ ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆದ ಗಂಗಾಧರ ಶೆಟ್ಟಿ ಹೊಸಮನೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಖಾದರ್, ಎಸ್.ಬಿ.ಕಾಲೇಜು ಉಪಪ್ರಾಂಶುಪಾಲೆ ಗೀತಾ, ಜ್ಞಾನೋದಯ ಬೆಥನಿ ಪಿ ಯು ಕಾಲೇಜಿನ ಮುಖ್ಯಗುರುಗಳಾದ ಜೋರ್ಜ್ ಕೆ ತೋಮಸ್ ಉಪಸ್ಥಿರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ 25 ವರ್ಷ ನಿರಂತರ ಸೇವೆ ಸಲ್ಲಿಸಿದ ಉಪನ್ಯಾಸಕಿ ಪೂರ್ಣಮಾ ಶೆಣೈಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಾಪಕ , ಅಧ್ಯಾಪಕೇತರವೃಂದ, ವಿದ್ಯಾರ್ಥಿಗಳು, ರಕ್ಷಕ ಶಿಕ್ಷಕ ವೃಂದದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.ಜ್ಞಾನೋದಯ ಬೆಥನಿ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಸ್ವಾಗತಿಸಿ,ಬೇಥನಿ ಐಟಿಐ ಪ್ರಾಂಶುಪಾಲರಾದ ಸಜಿಕೆ ತೋಮಸ್ ವಂದಿಸಿದರು. ಜಿಲ್‍ಶಿತಾ ಹಾಗೂ ಮೇಘಾ ಮತ್ತಾಯಿ ಕಾರ್ಯಕ್ರಮ ನಿರೂಪಿಸಿದರು.