ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಂಕನಾಡಿ ➤ಭತ್ತದ ಬೆಳೆಯಲ್ಲಿ ಸಮಗ್ರ ಪೋಷಕಾಂಶ & ಪರಿಸರ ಸ್ನೇಹಿ ಪೀಡೆಗಳ ನಿರ್ವಹಣೆಯ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.1.ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಂಕನಾಡಿ ವತಿಯಿಂದ ಬಂಟ್ವಾಳ ತಾಲ್ಲೂಕು ಕವಲಪಡುರು ಗ್ರಾಮದಲ್ಲಿ ಭತ್ತದ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳು ಮತ್ತು ಪರಿಸರ ಸ್ನೇಹಿ ಪೀಡೆಗಳ ನಿರ್ವಹಣೆ ಕುರಿತು ತರಬೇತಿಯನ್ನು ಮೂಂಚಿಣಿ ಪ್ರಾತ್ಯಕ್ಷಿಕೆಯ ಯೋಜನೆಯಡಿಯಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು.


ಈ ಕಾರ್ಯಕ್ರಮದಲ್ಲಿ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ನವೀನ್ ಕುಮಾರ್, ಬಿ.ಟಿ. ಮಾತಾನಾಡಿ ಭತ್ತದ ಬೆಳೆಯು ಒಂದು ಪ್ರಮುಖ ಆಹಾರ ಬೆಳೆಯಾಗಿದ್ದು ದಕ್ಷಿಣ ಕನ್ನಡದಲ್ಲಿ ನಾನಾ ಕಾರಣಗಳಿಂದ ದಿನದಿಂದ ದಿನಕ್ಕೆ ಭತ್ತದ ಕೃಷಿ ಕ್ಷೀಣಿಸುತ್ತಿದ್ದು ಇದರಿಂದ ಆಹಾರ ಉತ್ಪಾದನೆ ಮೇಲೆ ಹಾಗುವ ಪರಿಣಾಮವನ್ನು ವ್ಯಕ್ತಪಡಿಸುತ್ತ, ರೈತರು ಭತ್ತದ ಬೆಳೆಯಲ್ಲಿ ಅವೈಜ್ಞಾನಿಕ ಮತ್ತು ಅಪೂರ್ಣ ಪೋಷಕಾಂಶಗಳ ನಿರ್ವಹಣೆಯಿಂದಲೂ ಸಹ ಭತ್ತದ ಇಳುವರಿ ಕುಂಟಿತವಾಗಿದೆ ಎಂದು ತಿಳಿಸಿದರು.

ಭತ್ತದಲ್ಲಿ ಹಸಿರು ಎಲೆ ಗೊಬ್ಬರ ಬೆಳೆಗಳು, ಜೈವಿಕ ಗೊಬ್ಬರಗಳು ಮತ್ತು ಅಜೋಲಾದ ಉಪಯುಕ್ತತೆ ಮತ್ತು ಸಮಗ್ರ ಪೋಷಕಾಂಶಗಳ ಬಳಕೆಯ ಕುರಿತು ಮಾಹಿತಿ ನೀಡಿದರು. ಸಸ್ಯ ಸಂರಕ್ಷಣೆಯ ವಿಜ್ಞಾನಿ ಡಾ. ಕೇದಾರನಾಥ್, ಮಾತಾನಾಡಿ ಭತ್ತದಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆಗಾಗಿ ಅತೀಯಾದ ಕೀಟ ಮತ್ತು ರೋಗನಾಶಕಗಳ ಬಳಕೆ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ಭತ್ತದಲ್ಲಿ ಪರಿಸರ ಸ್ನೇಹಿ ಕೀಟ ಮತ್ತು ರೋಗಗಳ ನಿರ್ವಹಣೆಗೆ ಸೂಡೊಮೋನಾಸ ಪ್ಲೂರೋಸ್ಸೆನ್ಸ್‍ನಿಂದ ಬೀಜೋಪಚಾರ ಮಾಡುವುದು, ನಾಟಿಗೆ ಮುನ್ನ ಸಸಿಗಳ ತುದಿ ಗರಿಗಳನ್ನು ಕತ್ತರಿಸುವುದು, ಹಳದಿ ಕಾಂಡಕೊರಕದ ಮೊಟ್ಟೆಗಳ ಪರೋಪಜೀವಿಗಳಾದ ವಿವಿಧ ಬಗೆಯ ಟ್ರೈಕೋಗ್ರಾಮ ಬಳಕೆ, ಮೋಹಕ ಬಲೆ ಮತ್ತು ಬೇವಿನ ಎಣ್ಣೆಯ ಉಪಯುಕ್ತತೆ ಮತ್ತು ಬಳಕೆಯ ಕುರಿತು ಮಾಹಿತಿ ನೀಡಿದರು.ಮಣ್ಣಿನ ವಿಜ್ಞಾನಿ ಡಾ. ಮಲ್ಲಿಕಾರ್ಜುನ, ಎಲ್, ಅವರು ಮಾತಾನಾಡಿ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ತುಂಬ ಅವಶ್ಯಕವಾಗಿದ್ದು ಎಲ್ಲಾ ರೀತಿಯ ಸಸ್ಯ ಪೋಷಕಾಂಶಗಳನ್ನು ಮಣ್ಣು ಪರೀಕ್ಷೆಯ ಆಧಾರದ ಮೂಲಕ ಗೊಬ್ಬರಗಳನ್ನು ಅಗತ್ಯ ಪ್ರಮಾಣದಲ್ಲಿ ಉಪಯೋಗಿಸಿಕೊಂಡು ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು.

ಅಲ್ಲದೆ, ರೈತರಿಗೆ ಕೃಷಿ ಪರಿಕರಗಳಾದ ಪೋಟ್ಯಶ್, ಸತುವಿನ ಸಲ್ಫೇಟ್ ಹಾಗೂ ಟೈಕೋಡರ್ಮಾ ಗೊಬ್ಬರಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಕಾಡಬೆಟ್ಟು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಪ್ರಮೋದ್ ಕುಮಾರ ರೈ ಮಾತನಾಡಿ ಕೇಂದ್ರದ ವಿಜ್ಞಾನಿಗಳು ರೈತರ ಮನೆ ಬಾಗಿಲಿಗೆ ಬಂದಿರುವದರಿಂದ ಈ ಬಾಗದ ರೈತರು ಎಲ್ಲಾ ಬೆಳೆಗಳಲ್ಲಿ ಸೂಕ್ತವಾದ ವೈಜ್ಞಾನಿಕ ಮಾಹಿತಿಗಳನ್ನು ಪಡೆದು ಕೃಷಿ ಮಾಡಬೇಕಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾಣಿಕರಾಜ್ ಜೈನ್, ಶಿವಪ್ಪ ಗೌಡ, ಜಗದೀಶ ಕಾಮತ್ ಉಪಸ್ಥಿತರಿದ್ದರು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕ ಡಾ. ಹನುಮಂತಪ್ಪ ಡಿ. ವಂದಿಸಿದರು.

error: Content is protected !!

Join the Group

Join WhatsApp Group