ಸಾಂಪ್ರದಾಯಿಕ ಆಚರಣೆ: ಆಟಿ ಅಮಾವಾಸ್ಯೆ ➤ ಆಚಾರ ವಿಚಾರ

(ನ್ಯೂಸ್ ಕಡಬ) newskadaba.com ಕರಾವಳಿ, ಜುಲೈ.31. ಒಂದು ದಿನ ಮುಂಚಿತವಾಗಿ ಸಮಸ್ತ ಬಾಂಧವರಿಗೆ ನಾಳಿನ ಸಾಂಪ್ರದಾಯಿಕ ಆಚರಣೆಯಾದ ಆಟಿ ಅಮವಾಸ್ಯೆಯ ಶುಭಾಶಯಗಳು. ನಮ್ಮ  ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಸಾಮಾನ್ಯವಾಗಿ ತುಳು ಸಂಸ್ಕೃತಿಯನ್ನು ಆಚರಿಸಲಾಗುತ್ತದೆ. ಇಲ್ಲಿನ ಎಲ್ಲಾ ರೀತಿ ರಿವಾಜುಗಳು ಆಚರಣೆಯಲ್ಲಿ ಕಾಣಬಹುದು. ಇಂತಹ ಆಚರಣೆಯಲ್ಲಿ ತುಳುನಾಡಿನ ತುಳು ಪಂಚಾಂಗದ ರೀತಿ ತುಳುವರಿಗೆ  ಪಗ್ಗು ತಿಂಗಳಲ್ಲಿ ವರ್ಷ ಪ್ರಾರಂಭವಾದರೆ ಸುಗ್ಗಿ ತಿಂಗಳು ವರ್ಷದ ಕೊನೆಯ ತಿಂಗಳು ಅನ್ನುವುದು ವಾಡಿಕೆ. ತುಳುವರಿಗೆ ಪ್ರತಿಯೊಂದು ತಿಂಗಳು ವಿಶೇಷವೇ ಆಗಿದೆ. ಈಗ ಚಾಲ್ತಿಯಲ್ಲಿರುವ ಆಟಿ ತಿಂಗಳು ಕೂಡಾ ತುಳುವರಿಗೆ ಒಂದು ರೀತಿಯಲ್ಲಿ ಪವಿತ್ರವೇ ಆಗಿದೆ. ಯಾಕೆಂದರೆ ತುಳುನಾಡಿನ ಮೊದಲ ಹಬ್ಬ ಶುರುವಾಗುವುದು ಆಟಿ ಅಮವಾಸ್ಯೆಯ ದಿನ. ಆವತ್ತು ಬೆಳಿಗ್ಗೆ ಹಾಲೆಯ ಮರದ ಕಷಾಯ ಕುಡಿದು ಆನಂತರ ಆಟಿ ಅಮವಾಸ್ಯೆ ತೀರ್ಥ ಸ್ನಾನ ಮಾಡುವುದು ವಿಶೇಷ.

ನಂತರ ಬರುವ ಸಾರ್ವತ್ರಿಕ ಹಬ್ಬ ನಾಗರ ಪಂಚಮಿ ಕೂಡಾ ಇದೇ ಆಟಿ ತಿಂಗಳಲ್ಲಿಯೇ ಬರುವುದು. ಹಾಗಾಗಿ ಆಟಿ ತಿಂಗಳು ತುಳುನಾಡಲ್ಲಿ ಹೊಸ ಕಳೆಯನ್ನು ಕೊಡುತ್ತದೆ ಅನ್ನುವುದು ಸತ್ಯ. ಆಟಿ ತಿಂಗಳು ಅಂದರೆ ಆಟಿಕಲೆಂಜ ಇರಲೇಬೇಕು. ಒಂದು ಕಾಲದಲ್ಲಿ  ತುಳುನಾಡಿನ ಆಟಿ ತಿಂಗಳು ಅಂದರೆ ಹೊರಗೆ ಬಿಡದೇ ಸುರಿಯುವ ಜಡಿಮಳೆ ಆಗಿತ್ತು. ಹಾಗಾಗಿ ಯಾವುದೇ ಕೆಲಸ ಕಾರ್ಯಗಳು ನಡೆಯದೇ ಒಂದು ರೀತಿಯ ತಟಸ್ಥ ಜೀವನ.

ಹೊರಗೆ ಯಾವುದೇ ಪದಾರ್ಥ ದೊಯದಿರುವ ಕಾರಣ ಬೇಸಿಗೆಯಲ್ಲಿ ಹಲಸಿನ ಕಾಯಿಯನ್ನು ಉಪ್ಪಲ್ಲಿ ಹಾಕಿ ಇಡುವ ಕ್ರಮ ಇತ್ತು ಅದಕ್ಕೆ ಉಪ್ಪಡಚ್ಚಿಲ್ ಹೇಳುತ್ತಿದ್ದರು. ಅದೇ ರೀತಿ ಹಲಸಿನ ಬೀಜ ಬೇಯಿಸಿ ಒಣಗಿಸಿ ಅದನ್ನು ಮಳೆಗಾಲಕ್ಕೆ ಸಂಗ್ರಹಣೆ ಮಾಡುತ್ತಿದ್ದರು. ಅದಕ್ಕೆ ಸಾಂತಾನಿ ಅಂತ ಹೇಳುತ್ತಿದ್ದರು. ಅದಲ್ಲದೆ ಹಲಸಿನ ಹಣ್ಣಿನ ಹಪ್ಪಳ ಇತ್ಯಾದಿ ಪದಾರ್ಥಗಳು ಆಟಿತಿಂಗಳ ಬೇಸರ ಕಳೆಯಲು ಅಥವಾ ತಿನ್ನಲು ಉಪಯೋಗಿಸುತ್ತಿದ್ದರು. ಆಟಿ ತಿಂಗಳು ಅಂತ ಹೇಳಿ ಆಟಿಕಲೆಂಜನನ್ನು ಮರೆಯಬಾರದು.

ಮಳೆಗಾಲದಲ್ಲಿ ವಿಪರೀತ ಮಳೆ ಬಂದು ಕ್ರಿಮಿ ಕೀಟಗಳ ಸಂತತಿ ಜಾಸ್ತಿ ರೋಗ ರುಜಿನಗಳು  ಬರುತ್ತಿತ್ತು. ಇಂತಹ ರೋಗ ರುಜಿನಗಳನ್ನು ದೂರ ಮಾಡಲು ದೇವರ ಪ್ರತಿನಿಧಿಯಾಗಿ ಆಟಿಕಲೆಂಜ ಊರಲ್ಲಿ ಸುತ್ತಿ ಊರಿಗೆ ಬಂದ ಮಾರಿಯನ್ನು ಓಡಿಸುವುದೇ ಆಟಿಕಲೆಂಜನ ಉದ್ದೇಶ. ಹಾಗಾಗಿ ಕಲೆಂಜನು ದೋಷ ನಿವಾರಣೆಗಾಗಿ ಮನೆ ಮನೆಗೆ ತಿರುಗುತ್ತಾ  ದೋಷ ನಿವಾರಣೆ ಮಾಡುವ ಪದ್ದತಿ ಹಿಂದೆ ಇತ್ತು. ಪ್ರದರ್ಶನದ ಸಂದರ್ಭದಲ್ಲಿ ಮನೆಯ ಯಜಮಾನ ಅಥವಾ ಹಿರಿಯರು ಕಲೆಂಜನಲ್ಲಿ ತಮ್ಮ ಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ. ಕಲೆಂಜ ಪ್ರದರ್ಶನ ಸಂದರ್ಭದಲ್ಲಿ ಕೆಲವು ದೋಷ ನಿವಾರಣೆಗಾಗಿ ಪ್ರದರ್ಶಕರಿಂದ ನೀರು ಹೊಯ್ಯುವ ಪದ್ಧತಿ ಇದೆ.

ನೀರು ಹೊಯ್ಯುವ ಪದ್ಧತಿ
1.ತೆಂಗು ಫಲ ನೀಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವುದು.
2. ದನ ಕರು ಹಾಕದಿದ್ದರೆ ಅದರ ತಲೆಗೆ

3. ಮದುವೆಯಾಗಿ ಗರ್ಭಿಣಿಯಾಗದ ಹೆಂಗಸರ ತಲೆಗೆ
4. ವಯಸ್ಸಾದರೂ ಋತುಮತಿಯಾಗದ ಹುಡುಗಿಯ ತಲೆಗೆ
5. ಮಕ್ಕಳಿಗೆ ಸೌಖ್ಯ ಇಲ್ಲದಿದ್ದರೆ ಮಕ್ಕಳ ತಲೆಗೆ

ಹೀಗೆ ಮನುಷ್ಯ, ಪ್ರಾಣಿ, ಪಕ್ಷಿಗಳ ರೋಗ ರುಜಿನಾದಿಗಳನ್ನು ಜನಸಮುದಾಯ ಮತ್ತು ಸಾಕುಪ್ರಾಣಿಗಳ,ನಾಡಿನ ಫಸಲಿನ ಸಂರಕ್ಷಕನಾಗಿ ಕಲೆಂಜ ಕಾಣುತ್ತಾನೆ. ಮಳೆಗಾಲದ ಆಹಾರ ಪದ್ದತಿ ಇನ್ನೂ ವಿಶೇಷವಾಗಿದೆ. ಮಳೆಗಾಲದಲ್ಲಿ ಅಂದರೆ ತುಳುನಾಡಿನ ಆಟಿ ತಿಂಗಳಲ್ಲಿ ಮಾತ್ರ ಮಾಡುವ ತಿಂಡಿ ತಿನಿಸುಗಳು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವಂತದು. ಮಳೆಗಾಲದಲ್ಲಿ ಬರುವ ಸಾಮಾನ್ಯ ಕಾಯಿಲೆಗಳಾದ ಶೀತ ಜ್ವರ ಇತ್ಯಾದಿಗಳನ್ನು ನಿಯಂತ್ರಣದಲ್ಲಿ ಇಡಲು ಈ ಆಹಾರ ಪದ್ದತಿ ಸಹಕಾರಿಯಾಗಿದೆ. ಆಟಿ ಅಮವಾಸ್ಯೆಯಂದು ಮಾತ್ರ ಕುಡಿಯುವ ಹಾಲೆಮರದ ಕಷಾಯ, ಆದಿನ ಅದರಲ್ಲಿ ಎಲ್ಲಾ ರೋಗ ನಿವಾರಣೆ ಮಾಡುವ ಅಂಶಗಳು ಸೇರಿರುತ್ತದೆ ಅನ್ನುವ ನಂಬಿಕೆ ತುಳುವರದು.
ಹಾಗಾಗಿ ಅವತ್ತು ಹಾಲೆಮರದ ಕೆತ್ತೆಯನ್ನು ಕೆತ್ತಿ ಅದನ್ನು ಜಜ್ಜಿ ಅದರ ರಸಕ್ಕೆ ಕಾಳು ಮೆಣಸು ಬೆಳ್ಳುಳ್ಳಿ ಇತ್ಯಾದಿ ವಸ್ತುಗಳನ್ನು ಸೇರಿಸಿ ಬಿಳಿ ಕಲ್ಲನ್ನು ಕಾಯಿಸಿ ಒಗ್ಗರಣೆ ಕೊಟ್ಟು ಎಲ್ಲರೂ ಕುಡಿಯುವುದು ಆನಂತರ ತೆಂಗಿನಕಾಯಿ ಗಂಜಿ ಅಥವಾ ಕೆಲವು ಕಡೆ ಮೆಂತ್ಯ ಗಂಜಿ ಮಾಡಿ ತಿನ್ನುತ್ತಾರೆ. ಆಟಿ ತಿಂಗಳಲ್ಲಿ ಮಾಡುವ ಇನ್ನೊಂದು ಪ್ರಮುಖ ತಿಂಡಿ ಪತ್ರೊಡ್ಡೆ. ಕೆಸುವಿನ ಎಲೆಯಿಂದ ಮಾಡಿದ ತಿಂಡಿ ಈಗೀಗ ಬೇರೆ ಬೇರೆ ಎಲೆಗಳನ್ನು ಉಪಯೋಗಿಸುತ್ತಾರೆ. ಆದರೆ ಕೆಸುವಿನ ಎಲೆಯಿಂದ ಮಾಡಿದ ಸ್ವಾಧ  ಬೇರೆ ಎಲೆಗಳಿಂದ ಬರುವುದಿಲ್ಲ. ಆಟಿ ತಿಂಗಳಲ್ಲಿ ಮಾಡುವ ಇನ್ನೊಂದು ಪಲ್ಯ ಅಥವಾ ಪದಾರ್ಥ ಕಳಲೆ ಅಥವಾ ಕಣಿಲೆ ಅನ್ನುತ್ತಾರೆ. ಬಿದಿರಿನ ಮೊಳಕೆಯನ್ನು ಕಣಿಲೆ ಎನ್ನುತ್ತಾರೆ.
ಅದನ್ನು ಮಳೆಗಾಲದಲ್ಲಿ ಮಾತ್ರ ಪದಾರ್ಥ ಮಾಡತಕ್ಕದ್ದು. ಮಳೆಗಾಲ  ಅನ್ನುವುದು ಒಂದು ರೀತಿಯ ಆಚರಣೆ ಅಂತಲೇ ಹೇಳಬಹುದು. ಈಗೀಗ ಆಟಿಡೊಂಜಿ ಕೂಟ ಅಂತ ಆಚರಣೆ ಮಾಡುತ್ತಾರೆ. ಮುಖ್ಯವಾದ ಅಂಶಗಳನ್ನು ಹೊರತು ಪಡಿಸಿ ಇದು ಒಂದು ರೀತಿಯ ಒಣ ಆಚರಣೆಯಂತಾಗಿದೆ. ತುಳುನಾಡಿನ ನಿಜವಾದ ಆಟಿ ಆಚರಣೆ ಮಾಡಬೇಕಾದರೆ ಹಿಂದೆ ಬಂದ ರೀತಿಯಲ್ಲೇ ಮಳೆ ಬರಬೇಕು. ಅಂತಹ ಮಳೆಯಲ್ಲಿ ಸಾಂಪ್ರಾದಾಯಿಕ ಆಟಿ ಆಚರಣೆ ಮಾಡಬೇಕು. ಅದಕ್ಕಾಗಿ ಈಗಿರುವ ಪರಿಸರದ ಅಸಮತೋಲನ ನಿವಾರಣೆ ಮಾಡಬೇಕು. ಮಳೆಯ ಪ್ರಮಾಣ ಹೆಚ್ಚು ಮಾಡಿ ನಿಜವಾದ ಆಟಿ ಆಚರಣೆಯಲ್ಲಿ ತೊಡಗೋಣ.
error: Content is protected !!

Join the Group

Join WhatsApp Group