ಬಾಳು ಬಂಗಾರ ➤ ಅಳವಡಿಸಬೇಕಾದ ಸೂತ್ರಗಳು

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಜುಲೈ.31. ಅನೇಕ ಜನರಲ್ಲಿ ಸಂತಸ ಇರುತ್ತದೆ, ಆದರೆ ಜೀವನದಲ್ಲಿ ಸಂತಸವಿರುವುದಿಲ್ಲ. ಇಂತಹ ಜನರು ಜೀವನ ಪರ್ಯಂತ ಬೇರೆ ಜನರ ಮಾತಿಗೆ ತಲೆ ದೂಗಿಸಿ, ದೂಗಿಸಿ, ಕೆಟ್ಟ ಪರಿಸ್ಥಿತಿಗಳಿಗೆ, ಜನರಿಗೆ ಹೊಂದಿಸಿಕೊಂಡು ಹೋಗಿ, ಹೋಗಿ, ಕೊನೆಗೆ ನಿರಾಸಕ್ತಿಯಾಗುತ್ತಾರೆ .

ಜೀವನವು ಸಂತಸದಾಯಕವಾಗಿರಲು ಕೆಲವು ಸೂತ್ರಗಳು:

ಹೆತ್ತವರ ಮಾತನ್ನು ನಾವು ಯಾವಾಗಲೂ ಕೇಳಬೇಕು, ಅವರಿಗೆ ಯಾವಾಗಲೂ ಸಂತೋಷವಾಗುವಂತೆ ನಡೆದುಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳಬೇಕು.  ಬೆಳೆದು ನಿಂತ ನಿಮಗೆ ಅದು ಎಷ್ಟು ಸೂಕ್ತ? ನಿಮ್ಮ ತಂದೆ-ತಾಯಿಯರ ಮೇಲೆ ನಿಮಗೆ ಗೌರವ, ಪ್ರೀತಿ, ಆತ್ಮೀಯತೆ ಎಲ್ಲಾ ಇರಬಹುದು. ಆದರೆ, ಅವರ ಸ್ವರಗಳಿಗೆಲ್ಲಾ ಕುಣಿಯಲು ನೀವೇನು ಅವರ ಕೈಗೊಂಬೆಯ? ನೆನಪಿರಲಿ, ಅನ್ಯರ ಸಂತೋಷಕ್ಕೆ ನೀವು ಹೊಣೆಯಲ್ಲ. ಅವರವರನ್ನು ಅವರವರೇ ಸಂತೋಷಗೊಳಿಸಿಕೊಳ್ಳಬೇಕು.

ಒಂದೇ ಒಂದು ಸಲ ವಿಶಾಲಾಕ್ಷಮ್ಮನವರ ಸೊಸೆಯ ನಾದಿನಿಯ ಮಗುವಿನ ನಾಮಕರಣಕ್ಕೆ ಹೋಗಬೇಡಿ. ಇಷ್ಟ ಇರಲಿ ಬಿಡಲಿ, ನಿಮ್ಮನ್ನು ಆಹ್ವಾನಿಸಿದ ಸಮಾರಂಭಗಳಿಗೆಲ್ಲಾ ನೀವು ಹೋಗುತ್ತಿದ್ದರೆ ನಿಮ್ಮ ಅಮೂಲ್ಯ ಸಮಯವನ್ನು, ಚೈತನ್ಯವನ್ನು ಕಳೆದುಕೊಳ್ಳುತ್ತೀರಿ.  ಒಂದು ನೀರಸ ಸಂಗ್ರಹಣದ ಮಧ್ಯೆ ನೀವಿದ್ದರೆ, ನಿಮಗೆ ‘ಮಾತಾಡಿಸಬೇಕು’ ಎಂದು ಅನಿಸುವ ವ್ಯಕ್ತಿಯ ಬಳಿ ಹೋಗಿ ಮುಜುಗರವಿಲ್ಲದೆ ನಿಮ್ಮ ಪರಿಚಯ ಮಾಡಿಕೊಳ್ಳಿ. ಯಾಕೆ? ಯಾಕೆಂದರೆ ಒಬ್ಬ ಹೊಸ ವ್ಯಕ್ತಿಯನ್ನು ಭೇಟಿಯಾಗುತ್ತೀರಿ, ಹೊಸ ವಿಷಯಗಳು ತಿಳಿಯುತ್ತವೆ, ಸಮಯ ಕಳೆಯುತ್ತದೆ.

ಒಂದೇ ಒಂದು ಸಲ ನಿಮ್ಮ ಜೀವನದ ಸರ್ವಾಧಿಕಾರಿಗೆ ಎದುರು ಮಾತಾಡಿ. ನಿಮಗೆ ಒಂದೇ ಊರಿನಲ್ಲಿ ಹಲವು ವರ್ಷ ನೆಲೆಸಿ ಬೇಜಾರಾಗಿದೆಯಾ? ನಿಮಗೆ ಬೇರೆ ಜಾಗಕ್ಕೆ ಸ್ಥಳಾಂತರಿಸಲು ಏನು ಭಯ? ಅನೇಕ ಜನರು ತಮ್ಮ ಸುತ್ತ ಮುತ್ತಲಿನ ವಾತಾವರಣಕ್ಕೆ ಎಷ್ಟು ಹೊಂದಿಕೊಂಡುಬಿಟ್ಟಿರುತ್ತಾರೆಂದರೆ ಒಂದು ಸ್ವಲ್ಪ ದಿವಸದ ಅವಧಿಗೂ ಅವರು ಬೇರೆ ಕಡೆ ಹೋಗಲು ಯತ್ನಿಸುವುದಿಲ್ಲ. ಈ ವಾಕ್ಯವನ್ನು ನೀವು ಓದುತ್ತಿದಾಗಲೇ, ಪುಷ್ಪಕ ವಿಮಾನದಿಂದ ರಾವಣ ಗಗನದಿಂದ ಇಳಿದು, ನಿಮ್ಮನ್ನು ಪರಿವಾರ ಸಮೇತವಾಗಿ ಅಪಹರಿಸಿ, ನಾರ್ವೆ ದೇಶದ ಒಂದು ಮೈದಾನದಲ್ಲಿ ಬಿಟ್ಟು ಬಿಟ್ಟರೆ, ನೀವು, ನಿಮ್ಮ ಪರಿವಾರ ಏನು ಮಾಡುತ್ತೀರಿ? ಅಲ್ಲೇ ಕುಳಿತುಕೊಂಡು ಪೇಚಾಡುತ್ತೀರ? ಅಥವಾ ಸೃಜನಾತ್ಮಕ ರೀತಿಯಲ್ಲಿ ಜೀವನ ಮುಂದುವರಿಸುತ್ತೀರ? ನೀವು ಈಗಿರುವ ಜಾಗದಲ್ಲಿ ಸಂತೋಷವಾಗಿದ್ದರೆ, ಅಲ್ಲೇ ನೆಲೆಸುವುದರಲ್ಲಿ ತಪ್ಪೇನೂ ಇಲ್ಲ.

ಆದರೆ, ಒಂದೇ ಊರಿನಲ್ಲಿ ಇದ್ದು ಇದ್ದು ಬೇಸತ್ತರೂ, ಅದೇ ಜಾಗದಲ್ಲಿ, ಎತ್ತಿನ ಗಾಡಿಯ ಹಾಗೆ ಟಪ್ ಟಪ್ ಎಂದು ಹೊಡೆದು ಜೀವನವನ್ನು ಮುಂದಕ್ಕೆ ನಡೆಸುತ್ತಿರುವ ಜನರ ಮನೋಭಾವವನ್ನು ಇಲ್ಲಿ ಪ್ರಶ್ನಿಸಲಾಗುತ್ತಿದೆ. ಯಾರೇ ಎಷ್ಟೇ ಪ್ರಯತ್ನ ಪಟ್ಟರೂ ನಮ್ಮನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ.

ಇದು ವಿರಕ್ತ ಜೀವನವನ್ನು ಪ್ರತಿಪಾದಿಸುವ ಸೂತ್ರವಲ್ಲ, ಕೇವಲ ಒಂದು ಸಹಜ ಸತ್ಯ. ಈ ಸತ್ಯವನ್ನು ಅರ್ಥ ಮಾಡಿಕೊಂಡರೆ, ನಮ್ಮ ಪ್ರತ್ಯೇಕ ಅಸ್ತಿತ್ವವನ್ನು ಗೌರವಿಸುತ್ತಲೇ, ಮನೆಯವರೊಂದಿಗೆ ಒಂದು ಆತ್ಮೀಯ ಸಂಬಂಧವನ್ನು ಬೆಳೆಸಿಕೊಳ್ಳಬಹುದು. ಕೊನೆಯದಾಗಿ, ನೀವು ಹಿರಿಯ ನಾಗರಿಕರಾದರೆ, ನಿಮ್ಮ ಮಕ್ಕಳು ಅಥವಾ ಮೊಮಕ್ಕಳು ನಿಮಗೆ ಜೀವನದಲ್ಲಿ ಅರ್ಥ ಒದಗಿಸಬೇಕು ಎಂಬ ಮನೋಭಾವವನ್ನು ತೆಗೆದುಹಾಕಿ. ನಿಮ್ಮ ಸ್ವತಂತ್ರ ಜೀವನವನ್ನು ಆಚರಿಸಲು ಪ್ರಾರಂಭಿಸಿ.

error: Content is protected !!

Join the Group

Join WhatsApp Group