ಸಬಳೂರು: ತುಳುಸಂಸ್ಕೃತಿಯ ಪುನರುತ್ಥಾನಕ್ಕೆಮುನ್ನುಡಿ ಬರೆಯಬೇಕು – ಉಮೇಶ್ ಶೆಟ್ಟಿ

(ನ್ಯೂಸ್ ಕಡಬ) newskadaba.com ಕಡಬ, ಆ .14, ನಮ್ಮ ಹಿರಿಯರ ಕಾಲದಲ್ಲಿ ಬಡತನವಿದ್ದರೂ ಸಂಸ್ಕೃತಿಯ ಆಚರಣೆಯಲ್ಲಿ ವೈಭವವಿತ್ತು, ಆದರೆ ನಮಗೆ ಇಂದು ಸಿರಿತನ ವಿದ್ದರೂ ನಮ್ಮ ಸಂಸ್ಕೃತಿಯ ಆಚರಣೆಯಲ್ಲಿ ಬಡತನವಿದೆ ಎಂದು ನೂಜಿಬಾಳ್ತಿಲ ತೆಗರ್ ತುಳುಕೂಟದ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಂ ಹೇಳಿದರು.
ಅವರು ಭಾನುವಾರ ಕೊೖಲ ಗ್ರಾಮದ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸಬಳೂರು ರಾಣಿ ಅಬ್ಬಕ್ಕ ಜ್ಞಾನವಿಕಾಸ ಕೇಂದ್ರದ ವತಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ನಮ್ಮ ಹಿರಿಯರ ಆಚರಣೆ ಅಥವಾ ಸಂಪ್ರದಾಯದಲ್ಲಿ ವೈಜ್ಞಾನಿಕ ಹಿನ್ನಲೆಯಿದೆ, ಹಿಂದಿನ ಕಾಲದಲ್ಲಿ ಆಟಿ ತಿಂಗಳ ಕಷ್ಟದ ದಿನಗಳಲ್ಲಿ ಪ್ರಾಕೃತಿಕವಾದ ಆಹಾರ ಪದಾರ್ಥಗಳನ್ನು ನಮ್ಮ ಹಿರಿಯರು ಸೆವಿಸುತ್ತಿದ್ದರು, ಅದರ ಔಷದೀಯ ಗುಣಗಳನ್ನು ತಿಳಿದು ಅದಕ್ಕೆ ಅದರದ್ದೇ ಆದ ಕಟ್ಟುಪಾಡುಗಳನ್ನು ಮಾಡಿಕೊಂಡಿದ್ದರು, ಇದರಲ್ಲಿ ವೈಜ್ಞಾನಿಕ ಸತ್ಯ ಅಡಗಿತ್ತು, ಇದು ಯಾವತ್ತೂ ಮೂಢ ನಂಬಿಕೆಯಾಗಲು ಸಾಧ್ಯವಿಲ್ಲ, ನಮ್ಮ ಹಿರಿಯರು ನಮಗೆ ಕೊಟ್ಟ ಮೂಲ ನಂಬಿಕೆಯ ಅಡಿಪಾಯವನ್ನು ಮರೆಯಬಾರದು, ಅದರಿಂದ ನಮ್ಮ ತುಳು ಸಂಸ್ಕೃತಿಯ ಪುನರುತ್ಥಾನಕ್ಕೆ ಮುನ್ನುಡಿ ಬರೆಯಬೇಕು ಎಂದು ಹೇಳಿದ ಉಮೇಶ್ ಶೆಟ್ಟಿ ಆಧುನಿಕ ಬದುಕಿನಲ್ಲಿ ಐತಿಹಾಸಿಕ ಪರಂಪರೆ ನಂಬಿಕೆಗೆ ನಾವು ಬದ್ದರಾಗಿರಬೇಕು ಮಾತ್ರವಲ್ಲ ತುಳು ಕಲಿಕೆಗೆ ನಾವು ಪ್ರೋತ್ಸಾಹ ನೀಡಬೇಕು ಎಂದರು.
ಚೆನ್ನೆಮಣೆ ಆಟದ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಮುಖ್ಯಗುರು ವಾರಿಜ ಮಾತನಾಡಿ ಬದುಕಿನ ಜಂಜಾಟದಲ್ಲಿ ನಾವು ನಮ್ಮ ಸಂಸ್ಕಾರವನ್ನು ಮರೆಯಬಾರದು, ನಮ್ಮ ಮಕ್ಕಳಿಕೆ ಇಂದು ತುಳುನಾಡಿ ಗತವೈಭವದ ಲವಲೇಶವು ಗೊತ್ತಿಲ್ಲ, ನಮ್ಮ ಪ್ರತಿಯೊಂದು ಆಚರಣೆ ಸಂಪ್ರದಾಯಗಳು ನಮ್ಮ ಮುಂದಿನ ಪೀಳಿಗೆಗೆ ಉಳಿಯುವಂತೆ ಮಾಡಬೇಕು ಈ ನಿಟ್ಟಿನಲ್ಲಿ ತುಳು ಜಾನಪದ ಬದುಕಿನ ಆಚರಣೆಗಳು ನಿರಂತರ ನಡೆಯುತ್ತಿರಬೇಕು ಎಂದರು. ಕಡಬ ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊೖಲ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೊೖಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬುಡಲೂರು ಅಧ್ಯಕ್ಷತೆ ವಹಿಸಿದರು. ಯೋಜನೆಯ ಕಡಬ ವಲಯ ಮೇಲ್ವಿಚಾರಕ ಬಾಬು, ಸಬಳೂರು ಒಕ್ಕೂಟದ ಅಧ್ಯಕ್ಷ ರಾಜೀವ ಗೌಡ ಪಟ್ಟೆದ ಮೂಲೆ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ ಗೌಡ ಕೊಲ್ಯ, ಸೇವಾ ಪ್ರತಿನಿಧಿ ಜಯಶ್ರೀ, ಜ್ಞಾವಿಕಾಸ ಕೇಂದ್ರಗಳ ಸಮನ್ವಯ ಅಧಿಕಾರಿ ಸುಜಾತ ಪ್ರಸ್ತಾವನೆಗೈದರು.
ಜ್ಞಾನವಿಕಾಸ ಕೇಂದ್ರದ ಸದಸ್ಯೆ ಪ್ರೇಮಾ ಮಹಾಬಲ ನಾಯ್ಕ ಸ್ವಾಗತಿಸಿದರು. ಪುಷ್ಪಾ ಪುರಂದರ ವಂದಿಸಿದರು. ಸಂಯೋಜಕಿ ಮೀನಾಕ್ಷಿ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು. ಮಹಿಳೆಯರು ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿರುವುದಲ್ಲದೆ, ಆಗಮಿಸಿದ ಎಲ್ಲರಿಗೂ ಸವಿಯಲು ನೀಡಲಾಯಿತು. ಬಳಿಕ ಜ್ಞಾನವಿಕಾಸ ಕೇಂದ್ರ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

error: Content is protected !!

Join the Group

Join WhatsApp Group