(ನ್ಯೂಸ್ ಕಡಬ) newskadaba.com ಕಡಬ, ಆ .14. ಕುಟ್ರುಪಾಡಿ ಗ್ರಾಮ ಪಂಚಾಯತ್ನಲ್ಲಿ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣದಲ್ಲಿ ಜಿಲ್ಲಾ ಭ್ರಷ್ಟಚಾರ ದಳದಿಂದ ಕೇಸು ದಾಖಲಿಸಿಲ್ಪಟ್ಟ ಅಂದಿನ ಪ್ರಭಾರ ಪಿಡಿಒ ವಸಂತಿಯವರಿಗೆ ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕುಟ್ರುಪಾಡಿ ಗ್ರಾ.ಪಂ.ನಲ್ಲಿ 2015ರಲ್ಲಿ ನಿರ್ಮಲ ಗ್ರಾಮ ಯೋಜನೆಯಡಿಯಲ್ಲಿ ಕಾಂಪೋಸ್ಟ್ ಪೈಪ್ ಖರೀದಿಯ ಸಂದರ್ಭದಲ್ಲಿ ನಕಲಿ ಬಿಲ್, ಟಿನ್ ನಂಬರ್ ಬಳಸಿ ಪೈಪ್ ಖರೀದಿಸಲಾಗಿದೆ ಎಂದು ಗ್ರಾ.ಪಂ. ಮಾಜಿ ಸದಸ್ಯ ಕ್ಷೇವಿಯರ್ ಬೇಬಿ ಎಂಬವರು ಜಿಲ್ಲಾ ಭ್ರಷ್ಟಚಾರ ನಿಗ್ರಹ ದಳಕ್ಕೆ 2016 ಆ.9ರಂದು ದೂರು ನೀಡಿದ್ದು, ಈ ಪ್ರಕರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಹಾಗೂ ಅಂದಿನ ಪಿಡಿಒ ವಸಂತಿಯವರು ತಪ್ಪಿಸ್ಥರೆಂದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಎಸಿಬಿ ಪ್ರಕರಣ ದಾಖಲಿಸಿತ್ತು. ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷೆ ಜಾನಕಿಯವರು ಈ ಹಿಂದೆ ನಿರೀಕ್ಷಣಾ ಜಾಮೀನು ಪಡೆದಿದ್ದರು. ಈ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯಾಗಿದ್ದ ವಸಂತಿಯವರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಇವರ ಪರವಾಗಿ ವಕೀಲರಾದ ಸಂತೋಷ್ ಕುಮಾರ್ ಉಪ್ಪಿನಂಗಡಿ, ಶ್ರೀಧರ್ ಮತ್ತು ಅಶ್ವಿನ್ ವಾದಿಸಿದ್ದರು.
ಕುಟ್ರುಪಾಡಿ: ಗ್ರಾ.ಪಂ.ನಲ್ಲಿ ಪೈಪು ಖರೀದಿ ಅವ್ಯವಹಾರ ಪ್ರಕರಣ; ಹಿಂದಿನ ಪಿಡಿಒರವರಿಗೆ ನಿರೀಕ್ಷಣಾ ಜಾಮೀನು
