(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.11.ನೂಜಿಬಾಳ್ತಿಲ ಗ್ರಾ.ಪಂ. ಹಾಗೂ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹಯೋಹದೊಂದಿಗೆ ಸ್ವಚ್ಛ ಮೇವ ಜಯತೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಪಾಲಕರ ಸಮಾವೇಶ ನೂಜಿಬಾಳ್ತಿಲ ಬೆಥನಿ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಸಂಚಾಲಕ ವಂ| ಡಾ| ವರ್ಗೀಸ್ ಕೈಪನಡ್ಕ ಒಐಸಿ ಉದ್ಘಾಟಿಸಿದರು. ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ನಮ್ಮ ನೂಜಿಬಾಳ್ತಿಲ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತೆಯನ್ನು ಕಾಪಾಡುವಲ್ಲಿ ನಾವೆಲ್ಲ ಯಶಸ್ವಿಯಾಗಿದ್ದೇವೆ. ಸ್ವಚ್ಚ ಮೇವ ಜಯತೆ ಕಾರ್ಯಕ್ರಮ ಇಂದು ಸಮಾರೋಪಗೊಳ್ಳುತ್ತಿದೆ ಆದರೆ ಸ್ವಚ್ಚ ಪರಿಸರದ ಗುರಿಯನ್ನು ನಾವುಗಳು ಮುಂದುವರಿಸಿಕೊಂಡು ನಮ್ಮ ಮನೆ ಪರಿಸರ ಸ್ವಚ್ಚತೆಯಲ್ಲಿರುವಂತೆ ನೋಡಿಕೊಂಡಾಗ ಗ್ರಾಮಾದ್ಯಂತ ಶುಚಿತ್ವ ಕಾಪಾಡಬಹುದೆಂದ ಅವರು, ನೂಜಿಬಾಳ್ತಿಲ ಪಂ. ವ್ಯಾಪ್ತಿಗೆ ಶೀಘ್ರದಲ್ಲಿ ಘನ ತ್ಯಾಜ್ಯ ಘಟಕ ನಿರ್ಮಿಸಲಾಗುವುದು ಎಂದರು.
ತಾ.ಪಂ. ಸದಸ್ಯ ಗಣೇಶ್ ಕೈಕುರೆ ಮಾತನಾಡಿ, ಪೇಟೆ, ಪಟ್ಟಣಗಳ ಹೆಚ್ಚಿನ ಕಡೆಗಳಲ್ಲಿ ಕಸಗಳು ಕಂಡು ಬರುವುದು ನೋಡಿದಾಗ ಜನರು ಸ್ವಚ್ಚತೆಯ ಬಗ್ಗೆ ತಿಳಿವಳಿಕೆ ಹೊಂದಿಲ್ಲವೇ? ಎಂಬ ಸಂಶಯ ಮೂಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಪರಿಸರದ ಸ್ವಚ್ಚತೆಯನ್ನು ಹಾಳುಮಾಡಿ ಅದನ್ನು ಸ್ವಚ್ಚಗೊಳಿಸಲು ಅನುದಾನ ಬಳಸುವಂತಹ ಪರಿಸ್ಥಿತಿ ಬಂದೊದಗಿದೆ, ನಾವೆಲ್ಲರೂ ಸ್ವಚ್ಚತೆಗೆ ಕೈಜೋಡಿಸಿದಾಗ ಸ್ವಚ್ಚ ಪರಿಸರ ನಿರ್ಮಾಣ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ, ಗ್ರಾಮಸ್ಥರ ಸಹಕಾರದಿಂದ ನೂಜಿಬಾಳ್ತಿಲ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತೆಯಿಂದ ಕೂಡಿದ್ದು, ಸ್ವಚ್ಚತೆ ಕಡೆ ಎಲ್ಲರೂ ಗಮನಹರಿಸಿದಾಗ ಪರಿಸರ ನಾಶ ತಡೆಗಟ್ಟಬಹುದೆಂದರು.
ಸ್ವಚ್ಚ ಮೇವ ಜಯತೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳ ವಿಜೆತರಿಗೆ ಬಹುಮಾನ ವಿತರಿಸಲಾಯಿತು. ನೂಜಿಬಾಳ್ತಿಲ ಪಂಚಾಯತ್ ವತಿಯಿಂದ ಪ್ಲಾಸ್ಟಿಕ್ ಚೀಲ ತ್ಯಜಿಸಿ ಬಟ್ಟೆ ಚೀಲ ಬಳಸುವಂತೆ ಉತ್ತೇಜಿಸುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಬಟ್ಟೆ ಚೀಲವನ್ನು ವಿತರಿಸಲಾಯಿತು. ವಿದ್ಯಾರ್ಥಿನಿಯರು ಸ್ವಚ್ಚತೆ ಬಗ್ಗೆ ನೃತ್ಯ ಮಾಡಿದರು. ಸಂಸ್ಥೆಯ ಕೋಶಾಧಿಕಾರಿ ವಂ| ಗೀವರ್ಗೀಸ್ ಬರ್ಸೋಮ, ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನದ ಪ್ರಭಾರ ಸಂಚಾಲಕ ವರ್ಗೀಸ್, ಮುಖ್ಯಗುರುಗಳಾದ ಸುಬ್ರಹ್ಮಣ್ಯ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್. ಸ್ವಾಗತಿಸಿ, ನೂಜಿಬಾಳ್ತಿಲ ಪಿಡಿಒ ಆನಂದ ಎ. ವಂದಿಸಿದರು. ವಿದ್ಯಾರ್ಥಿ ಸಮ್ಯತ್ ಕಾರ್ಯಕ್ರಮ ನಿರೂಪಿಸಿದರು. ನೂಜಿಬಾಳ್ತಿಲ ಗ್ರಾ.ಪಂ.ವ್ಯಾಪ್ತಿಯ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಂಸ್ಥೆಯ ಮಕ್ಕಳ ಪೋಷಕರು, ಶಿಕ್ಷಕ ವೃಂದ, ಪಂಚಾಯತ್ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಾಲಕರ ಸಮಾವೇಶ;
ನೂಜಿಬಾಳ್ತಿಲ ಬೆಥನಿ ಸಂಸ್ಥೆಯ ಪಾಲಕರ ಸಮಾವೇಶದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್. ಇಲಾಖೆ ವತಿಯಿಂದ ಶಾಲಾ, ಕಾಲೇಜುಗಳಿಗೆ ಹೊರಡಿಸಲಾದ ಸುರಕ್ಷಾ ಮಾಹಿತಿಯನ್ನು ನೀಡಿದರು. ಉಜಿರೆ ರುಡ್‍ಸೆಟ್ ಸಂಸ್ಥೆಯ ರಾಷ್ಟ್ರೀಯ ತರಭೇತುದಾರ ಅಬ್ರಾಹಂ ಜೇಮ್ಸ್ ಅವರು ಉತ್ತಮ ಪೋಷಕರಾಗಲು ಎಂಬ ವಿಷಯದ ಕುರಿತು ಸಭೆಯಲ್ಲಿ ಉಪನ್ಯಾಸ ನೀಡಿದರು. 2019-20ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ರಕ್ಷಕ ಶಿಕ್ಷಕ ಸಂಘದ ನಿರ್ಗಮನ ಅಧ್ಯಕ್ಷ ಖಾದರ್ ಸಾಹೇಬ್ ಮಾತನಾಡಿದರು.
ಸಮ್ಮಾನ;
ನೂಜಿಬಾಳ್ತಿಲ ವ್ಯಾಪ್ತಿಯಲ್ಲಿ ಸ್ವಚ್ಚತೆ
ಗೆ ವಿಶೇಷ ಕೊಡುಗೆ ನೀಡುತ್ತಿರುವ ಸಂಸ್ಥೆಯ ನಿರ್ದೇಶಕ ವಂ| ಝಖರಿಯಾಸ್ ನಂದಿಯಾಟ್ ರನ್ನು ಅತಿಥಿಗಳು ಸಮ್ಮಾನಿಸಿ, ಗೌರವಿಸಿದರು.