(ನ್ಯೂಸ್ ಕಡಬ) newskadaba.comಉಪ್ಪಿನಂಗಡಿ, ಜುಲೈ.9.ತುಂಬೆಯಿಂದ ಪಡೀಲ್ ಪಂಪ್‌ಹೌಸ್‌ಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯಲ್ಲಿ ಅಡ್ಯಾರ್‌ನ ಮಾತಾ ನರ್ಸರಿಯ ಮುಂಭಾಗದಲ್ಲಿ ರವಿವಾರ ರಾತ್ರಿ ನೀರು ಸೋರಿಕೆಯಾಗಿತ್ತು.
ಮುಖ್ಯ ಪೈಪ್‌ಲೈನ್‌ನ ಜಾಯಿಂಟ್‌ನಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ನೀರು ಸೋರಿಕೆಯಾಗುತ್ತಿತ್ತು. ಪಡೀಲ್‌ಗೆ ತುಂಬೆಯಿಂದ ನೀರು ಸರಬರಾಜು ಆಗುವ ಪ್ರಮಾಣದಲ್ಲಿ ರವಿವಾರ ರಾತ್ರಿ ವೇಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಪೈಪ್‌ಲೈನ್ ಪರಿಶೀಲಿಸಿದಾಗ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ತುಂಬೆಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯು ಅಡ್ಯಾರ್‌ನ ರಾ.ಹೆ.ಯ ಸಮೀಪ ಸೋರಿಕೆಯಾಗಿದ್ದು, ಪಾಲಿಕೆ ವತಿಯಿಂದ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ. ಜೇಸಿಬಿ ಸಹಾಯದಿಂದ ಪೈಪ್‌ಲೈನ್ ಮೇಲೆ ಹಾಕಿರುವ ಮಣ್ಣನ್ನು ತೆರವು ಮಾಡುವ ಕಾಮಗಾರಿ ಸೋಮವಾರ ಮುಂಜಾನೆಯಿಂದ ಆರಂಭಿಸಲಾಗಿತ್ತು.
ಈ ವೇಳೆ ತುಂಬೆಯಿಂದ ಪಡೀಲ್ ಪಂಪ್‌ಹೌಸ್‌ಗೆ ನೀರು ಸರಬರಾಜು ಸ್ಥಗಿತ ಮಾಡಲಾಗಿತ್ತು. ಸೋರಿಕೆಯಾದ ಜಾಗದಲ್ಲಿ ಪೈಪ್‌ಲೈನ್‌ನ ಮೇಲ್ಗಡೆ ಸುಮಾರು ಒಂದೂವರೆ ಮೀಟರ್‌ನಷ್ಟಿದ್ದ ಮಣ್ಣನ್ನು ತೆರವುಗೊಳಿಸಿದ್ದು, ಪೈಪ್‌ಲೈನ್ ಜೋಡಣೆ ಕಾರ್ಯ ನಡೆಯುತ್ತಿದೆ.ಮಳೆ ಆರಂಭವಾದ ಬಳಿಕ ತುಂಬೆಯಲ್ಲಿ ಟ್ರಾನ್ಸ್‌ಫಾರ್ಮರ್‌ಗೆ ಹಾನಿ, ಪಂಪ್‌ಸೆಟ್‌ನಲ್ಲಿ ಸಮಸ್ಯೆ ಸಹಿತ ವಿವಿಧ ತಾಂತ್ರಿಕ ಸಮಸ್ಯೆಗಳು ಕಾಣಿಸುತ್ತಲೇ ಇವೆ. ಬೃಹತ್ ಕೇಬಲ್‌ನಲ್ಲಿ ಸಮಸ್ಯೆ ಎದುರಾದ ಕಾರಣದಿಂದ ಪಡೀಲ್ ಪಂಪ್‌ಹೌಸ್‌ಗೆ ನೀರು ಸರಬರಾಜು ಸ್ಥಗಿತಗೊಂಡು, ನಗರದ ಅರ್ಧದಷ್ಟು ಭಾಗಗಳಿಗೆ ನೀರಿರದೆ ಸಮಸ್ಯೆ ಸೃಷ್ಟಿಯಾಗಿತ್ತು.