(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.5.ಕಳೆದ ಒಂದು ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿ ಯಲ್ಲಿ ಡೆಂಗ್ಯೂ ಪ್ರಕರಣಗಳು ಮೂರುಪಟ್ಟು ಹೆಚ್ಚಳವಾಗಿದ್ದು, 1,830 ಪ್ರಕರಣಗಳು ದೃಢಪಟ್ಟಿವೆ.
ಹೀಗಾಗಿ ಡೆಂಗ್ಯೂ ನಿಯಂತ್ರಣ ಅನಿವಾರ್ಯ ವಾಗಿದ್ದು, ಜನರದಲ್ಲಿ ಜಾಗೃತಿ ಮೂಡಿಸಲು, ಸೊಳ್ಳೆಗಳು ಹೆಚ್ಚಳವಾಗದಂತೆ ವಾರ್ಡ್ ಮಟ್ಟದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ವಾರ್ಡ್‌ಗೆ ಇಬ್ಬರು ಸಂಪರ್ಕ ಕಾರ್ಯಕರ್ತರ ನಿಯೋಜಿಸಲು ತೀರ್ಮಾನಿಸಲಾಗಿದೆ.ಸಂಪರ್ಕ ಕಾರ್ಯಕರ್ತರು ಮನೆಗಳಿಗೆ ತೆರಳಿ ಜನರಲ್ಲಿ ತೆರೆದ ತೊಟ್ಟಿಯಲ್ಲಿ ನೀರು ಸಂಗ್ರಹಿಸದಂತೆ, ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಹಾಗೂ ಸೊಳ್ಳೆಗಳ ಹೆಚ್ಚಳಕ್ಕೆ ಕಾರಣಗಳನ್ನು ತಿಳಿಸಿ ಜಾಗೃತಿ ಮೂಡಿಸಲಿದ್ದಾರೆ. ಜತೆಗೆ ವಾರ್ಡ್‌ನಲ್ಲಿನ ಡೆಂಗ್ಯೂ ಶಂಕಿತರು, ಅವರ ಚಿಕಿತ್ಸೆ ಕುರಿತು ಮಾಹಿತಿ ನೀಡಲು ಸೂಚಿಸಿದ್ದು, ಇದಕ್ಕಾಗಿ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಬಿಬಿಎಂಪಿ ಆರೋಗ್ಯ ವಿಭಾಗ ಅಧಿಕಾರಿಗಳಿಗೆ ನಿತ್ಯ ಮಾಹಿತಿ ರವಾನೆ ಮಾಡಲಿದ್ದಾರೆ. ಸಹಯೋಗದೊಂದಿಗೆ ಕಾರ್ಯನಿರ್ವಹಿಸಲು ಸೂಚನೆ: ಬೆಂಗಳೂರಿನ 198 ವಾರ್ಡ್‌ಗಳ ಪೈಕಿ 135 ವಾರ್ಡ್ ಬಿಬಿಎಂಪಿ ಆರೋಗ್ಯ ವಿಭಾಗದ ವ್ಯಾಪ್ತಿಗೆ ಹಾಗೂ 63 ವಾರ್ಡ್ ಜಿಲ್ಲಾಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುತ್ತವೆ.
ಜತೆಗೆ ಬಿಬಿಎಂಪಿ ಎಂಟು ವಲಯಗಳನ್ನು ಎರಡೂ ಇಲಾಖೆಗಳಿಗೂ ವಿಭಾಗಿಸಿ ಡೆಂಗ್ಯೂ ಹತೋಟಿಗೆ ಸೂಚಿಸಿದ್ದಾರೆ. ನಗರದಲ್ಲಿ ಕೆಲವೆಡೆ ನೀರಿನ ಸಮಸ್ಯೆ ಇದ್ದು, ಸಾರ್ವಜನಿಕರು ತಮ್ಮ ಮನೆಗಳಲ್ಲಿ ಅಗತ್ಯ ಪ್ರಮಾಣದ ನೀರು ಶೇಖರಿಸುತ್ತಿದ್ದಾರೆ.ಈ ವೇಳೆ ನೀರು ಸಂಗ್ರಹಿಸದಂತೆ ಪಾಲಿಕೆ ಅಧಿಕಾರಿಗಳು ಹೇಳಿದರೆ ಸಾರ್ವಜನಿಕರು, ‘ಮುಂದೆ ನಮಗೆ ನೀರಿಗೆ ಸಮಸ್ಯೆಯಾಗುತ್ತದೆ ಎಂದು ಜನ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಶೇಖರಿಸುವ ನೀರನ್ನು ಒಂದು ಬಟ್ಟೆಯಿಂದ ಮುಚ್ಚಲು ಸೂಚಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆನಗರದ ವಿವಿಧೆಡೆ ರಸ್ತೆ ಅಭಿವೃದ್ಧಿ ಸೇರಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿದ್ದು, ಇವುಗಳು ಮಂದಗತಿಯಲ್ಲಿ ಸಾಗುತ್ತಿವೆ. ಇದರಿಂದಾಗಿ ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆಗಳು ಹೆಚ್ಚಾಗುತ್ತಿವೆ.ವಿಲ್ಸನ್ ಗಾರ್ಡನ್ ಸುತ್ತಲ ರಸ್ತೆಗಳ ಬದಿ ತ್ಯಾಜ್ಯ ರಾಶಿ ಕಂಡು ಬರುತ್ತಿದೆ. ಮಾರುಕಟ್ಟೆ ಪ್ರದೇಶಗಳಲ್ಲಿ ಅಂಗಡಿ ಮುಂಭಾಗ ತ್ಯಾಜ್ಯ ಗುಡ್ಡೆಗಳು ನಿರ್ಮಾಣವಾಗಿವೆ. ಈ ಬಗ್ಗೆ ಸ್ಥಳೀಯರನ್ನು ಪ್ರಶ್ನಿಸಿದರೆ ಬಿಬಿಎಂಪಿ ತ್ಯಾಜ್ಯ ಸಂಗ್ರಹಣಾ ವಾಹನ ಸಮರ್ಪಕವಾಗಿ ಬರುತ್ತಿಲ್ಲ ಎನ್ನುತ್ತಾರೆ. ನಗರದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ನಿಯಂತ್ರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ.