(ನ್ಯೂಸ್ ಕಡಬ) newskadaba.com ಉಡುಪಿ, ಜುಲೈ.3.ತೆರೆಮರೆಗೆ ಸರಿದಿದ್ದ ಉಡುಪಿ ಕೈಮಗ್ಗ ಉದ್ಯಮ ಮತ್ತೆ ಚಿಗುರಿದ್ದು, ಇಲ್ಲಿನ ಸೀರೆಗಳಿಗೆ ಮತ್ತೆ ಬೇಡಿಕೆ ಸೃಷ್ಟಿಯಾಗತೊಡಗಿದೆ.
ಪ್ರಸ್ತುತ ಕಾರ್ಕಳದ ಕದಿಕೆ ಟ್ರಸ್ಟ್ ಹಾಗೂ ಸಾಗರದ ಚರಕ ಗ್ರಾಮೋದ್ಯೋಗ ಸಂಸ್ಥೆ ಜತೆಯಾಗಿ ಜಿಐ ಮಾನ್ಯತೆಯ ನೈಸರ್ಗಿಕ ಬಣ್ಣದ ಉಡುಪಿ ಸೀರೆಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಹೊಸ ಬಗೆಯ ಅವಕಾಶಕ್ಕೆ ತೆರೆದುಕೊಳ್ಳುತ್ತಿದೆ.ನೈಸರ್ಗಿಕ ಬಣ್ಣದ ಕೈಮಗ್ಗ ಸೀರೆಗಳು ಎಲ್ಲಾ ಕಾಲಕ್ಕೂ ಹೊಂದಿಕೊಳ್ಳುವುದರಿಂದ ಹಾಗೂ ಚರ್ಮಕ್ಕೆ ಹಾನಿಕಾರಕವಲ್ಲ. ಇದರಿಂದಾಗಿ ಯುವಜನತೆ ಸೀರೆ ಖರೀದಿಯಲ್ಲಿ ಆಸಕ್ತಿ ತೋರುತ್ತಿದ್ದಾರೆ.
ತಾಳಿಪಾಡಿ ಸೊಸೈಟಿ 8 ಲಕ್ಷ ವಾರ್ಷಿಕ ವ್ಯವಹಾರ ಮಾಡುತ್ತಿದ್ದು, ಅವಿಭಜಿತ ಜಿಲ್ಲೆಯಲ್ಲಿ 20 ಲ.ರೂ., ಕೈಮಗ್ಗ ಸೀರೆಗಳ ವಹಿವಾಟು ನಡೆಸಲಾಗುತ್ತಿದೆ. ಇದನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಚರಕ ಸಂಸ್ಥೆ ಹಾಗೂ ಕದಿಕೆ ಟ್ರಸ್ಟ್ ಕಾರ್ಯಪ್ರವೃತ್ತವಾಗಿದೆ.ಯುವ ನೇಕಾರರಿಗೆ ಮುಂದಿನ ವಾರ ನೈಸರ್ಗಿಕ ಬಣ್ಣ ಅಳವಡಿಕೆ ತರಬೇತಿ ನೀಡಲಾಗುತ್ತಿದೆ. ಜತೆಗೆ ಯುವಪೀಳಿಗೆ ಪರಂಪರಾಗತ ವೃತ್ತಿ ಮುಂದುವರಿಸುವ ನಿಟ್ಟಿನಲ್ಲಿ ಪ್ರೋತ್ಸಾಹ, ಸೂಕ್ತ ಸಂಭಾವನೆ, ಮಾರುಕಟ್ಟೆ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಾಳಿಪಾಡಿ ಸೊಸೈಟಿ ಸಿಇಒ ಮಾಧವ ಶೆಟ್ಟಿಗಾರ್ ತಿಳಿಸಿದರು.