ವಿದ್ಯಾರ್ಥಿಗಳು ದುಷ್ಚಟಗಳ ದಾಸರಾಗಬೇಡಿ ➤ ಕಡ್ಲೂರು ಸತ್ಯನಾರಾಯಣಾಚಾರ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.3.ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಎಲ್ಲರ ಜೊತೆ ಒಳ್ಳೆಯ ಒಡನಾಟ ಬೆಳೆಸಿಕೊಂಡು ಶಿಕ್ಷಣ ಪಡೆದು ಕುಟುಂಬ ಹಾಗೂ ಸಮಾಜಕ್ಕೆ ಮಾದರಿಯಾಗಬೇಕಾದ ಯುವ ಜನತೆ, ದುಷ್ಚಟಗಳಿಗೆ ದಾಸರಾಗಿ ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡುತ್ತಿರುವುದು ಸಮಾಜಕ್ಕೆ ಆತಂಕಕಾರಿಯಾಗಿದೆ.

ಆದುದರಿಂದ ಹದಿಹರೆಯದ ವಯಸ್ಸಿನಲ್ಲಿ ಯುವಜನರು ದಾರಿ ತಪ್ಪಿ ಹೋಗದಂತೆ, ಆರೋಗ್ಯ ಇಲಾಖೆಯವರು ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವಂತಹ ಅನಾಹುತಗಳ ಕುರಿತು ಅರಿವು ಮೂಡಿಸುವಂತಹ ಕಾರ್ಯಕ್ರಮ ನಡೆಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಡ್ಲೂರು ಸತ್ಯನಾರಾಯಣಾಚಾರ್ಯ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ಆರೋಗ್ಯ ವಿಭಾಗ ) ನಗರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ, ರೊಜಾರಿಯೊ ಪದವಿ ಪೂರ್ವ ಕಾಲೇಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ಸಿಐಎಸ್‍ಎಫ್ (ಎಂಆರ್‍ಪಿಎಲ್) ಮಂಗಳೂರು ಇವರ ಸಂಯುಕ್ತ ಆಶ್ರಯದೊಂದಿಗೆ ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ಹಾಗೂ ಅಕ್ರಮ ಕಳ್ಳಸಾಗಾಣಿಕೆ ತಡೆಗಟ್ಟುವ ದಿನ-2019 ಕಾರ್ಯಕ್ರಮದ ಉದ್ಘಾಟನೆ ನಡೆಸಿ ಮಾತನಾಡಿದ ಇವರು ಮಾದಕ ವ್ಯಸನದ ಹಾವಳಿ ಇತ್ತೀಚೆಗೆ ಹೆಚ್ಚುತ್ತಿದೆ.

ಅದರಲ್ಲೂ ಯುವ ಜನತೆ ಇದರ ಬಲಿಪಶು ಆಗುತ್ತಿರುವುದು ಬೇಸರದ ವಿಚಾರವಾಗಿದೆ. ಮಾದಕ ವಸ್ತುಗಳ ಸೇವನೆಯಿಂದ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳವುದರ ಜೊತೆಯಲ್ಲಿ ಸಮಾಜದಲ್ಲಿ ತಮ್ಮ ಕುಟುಂಬವು ಅವಮಾನಕ್ಕೆ ತುತ್ತಾಗಿ ಸಂಸಾರವು ನಾಶವಾಗುವಂತಹ ಸ್ಥಿತಿ ಕಾಣಸಿಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಪೋಷಕರು ತಮ್ಮ ಮಕ್ಕಳನ್ನು ಪ್ರತಿಷ್ಟಿತ ವಿದ್ಯಾಸಂಸ್ಥೆಗೆ ಕಳುಹಿಕೊಡುತ್ತಾರೆ. ಅಲ್ಲಿಗೆ ತಮ್ಮ ಕಾರ್ಯ ಪೂರ್ಣಗೊಂಡಿತು ಎಂದು ತಿಳಿದು ವಿದ್ಯಾರ್ಥಿಗಳನ್ನು ಅವರಷ್ಟಕ್ಕೆ ಬಿಡದೆ, ಅವರ ಮನಸ್ಥಿತಿಯನ್ನು ಅರಿತುಕೊಳ್ಳಬೇಕು.

Also Read  ಕೋಡಿಂಬಾಳದಲ್ಲಿ ಡೆಂಗ್ಯೂ ಪತ್ತೆ➤ ಜ್ವರ ಪೀಡಿತರ ಮನೆಗೆ ಅಧಿಕಾರಿಗಳ ಭೇಟಿ

ಈಗಿನ ಕಾಲದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮಾಡುವವರು ಮೊದಲಿಗೆ ಆರಿಸಿಕೊಳ್ಳುವುದು ಇಂತಹ ವಿದ್ಯಾಸಂಸ್ಥೆಗಳನ್ನು, 18 ರಿಂದ 30 ವರ್ಷದ ಯುವಕರು ಹೆಚ್ಚಾಗಿ ತಮ್ಮ ಭವಿಷ್ಯದ ಬಗ್ಗೆ ಚಿಂತಿಸದೆ, ಸರಿ ತಪ್ಪುಗಳ ಬಗ್ಗೆ ಹರಿವು ಇರದೆ ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೊಸ ತಲೆಮಾರು ಇಂಟರ್‍ನೆಟ್ ಮೂಲಕ ಮಾದಕವಸ್ತುವಿನ ವ್ಯವಹಾರ ನಡೆಸುತ್ತಿದೆ. ಒಂದು ಬಾರಿ ಇಂತಹ ಚಟಗಳಿಗೆ ಬಲಿಯಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ ವಿದ್ಯಾರ್ಥಿಗಳು ಇಂತಹ ದುಷ್ಚಟಗಳಿಗೆ ಒಳಗಾಗದೇ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೊಜಾರಿಯೊ ವಿದ್ಯಾಸಂಸ್ಥೆಗಳ ಸಂಚಾಲರಾದ ರೆ| ಫಾ| ಜೆ.ಬಿ ಕ್ರಾಸ್ತ ಇವರು ಮಾತನಾಡಿ ಮಾದಕ ದ್ರವ್ಯ ಸೇವನೆ ಎಷ್ಟು ಅಪರಾಧವೋ ಅದನ್ನು ಮಾರಾಟ/ ಸಾಗಾಣಿಕೆ ಮಾಡುವುದು ಅಪ್ಟೇ ಅಪರಾಧವಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಇಂತಹ ವಸ್ತುಗಳಿಂದ ದೂರವಿರಿ. ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ, ಸಮಸ್ಯೆಗಳನ್ನು ಮರೆಯಲೆಂದು ಅಥವಾ ಒಂಟಿತನ ನಿವಾರಣೆಗಾಗಿ ಮಾದಕ ವಸ್ತುವಿನ ದಾಸರಾಗುತ್ತಾರೆ. ಜೀವನದಲ್ಲಿ ಮುಂದಕ್ಕೆ ಅದರ ಸೇವನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ತಮ್ಮ ಮನೋಸಾಮಥ್ರ್ಯವನ್ನು ಕಳೆದುಕೊಳ್ಳುತ್ತಾರೆ. ಅದರಿಂದ ಹೊರಬರಲು ಸಾಧ್ಯವಾಗದೇ ಮತ್ತೆ ಮತ್ತೆ ಅದರೆಡೆಗೆ ಆಕರ್ಷಿತರಾಗುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಇಂದೇ ನಿರ್ಧರಿಸಿ ನಾವು ಈ ವಸ್ತುಗಳ ದಾಸರಾಗದೇ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುತ್ತೇವೆ ಹಾಗೂ ಇಂತಹ ಚಟಗಳಿಗೆ ಒಳಪಟ್ಟ ವ್ಯಕ್ತಿಗಳನ್ನು ಹೊರತರಲು ತಮ್ಮ ಕೈಲಾದ ಮಟ್ಟಗೆ ಪ್ರಯತ್ನ ಪಡುತ್ತೇವೆ ಎಂದು ನಿರ್ಧರಿಸಬೇಕು ಎಂದು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಹೇಳಿದರು.

Also Read  ಕಾರು ಅಪಘಾತ: 4ನೇ ತರಗತಿ ವಿದ್ಯಾರ್ಥಿ ಮೃತ್ಯು..!

ಇದೇ ಸಂಧರ್ಭದಲ್ಲಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪ್ರಬಂಧ ಸ್ಫರ್ಧೆಯ ವಿಜೇತರಾದ ಮೇಘರಾಜ್ ಪ್ರಥಮ ಪಿಯುಸಿ, ಆಸ್ಟಿನ್ ವಾಸ್ ದ್ವಿತೀಯ ಪಿಯುಸಿ, ಡಿಕ್ಸನ್ ರೋಯಲ್ ಪಿಂಟೋ ದ್ವಿತೀಯ ಪಿಯುಸಿ, ಕೀರ್ತಿ ನಾಯಕ್ 10 ನೇ ತರಗತಿ, ಹರಿಹರನ್ 10 ನೇ ತರಗತಿ, ಸಚಿನ್ ಗಾಲಕರ್ 9 ನೇ ತರಗತಿ ಇವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.ಮಾನಸಿಕ ರೋಗ ತಜ್ಞರಾದ ಡಾ ಅನಿರುದ್ಧ ಶೆಟ್ಟಿ ಹಾಗೂ ಸಿಐಎಸ್‍ಎಫ್ ಸೆಂಟ್ರಲ್ ಆರ್ಮ್‍ಡ್ ಪೊಲೀಸ್ ಪೊರ್ಸ್, ಎಮ್.ಆರ್.ಪಿ,ಎಲ್ ಯುನಿಟ್‍ನ ಉಪ ಕಮಾಂಡೆಂಟ್ ಮೃತ್ಯುಂಜಯ ಸ್ವಾಮಿ ಡಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಎ.ಜಿ ಗಂಗಾಧರ್, ರೊಜಾರಿಯೊ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ| ಫಾ|ವಿಕ್ಟರ್ ಡಿಸೋಜಾ, ರೊಜಾರಿಯೊ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಲೋಶಿಯಸ್ ಡಿಸೋಜಾ, ಡಾ ರತ್ನಕಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.

error: Content is protected !!
Scroll to Top