(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.2.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ರವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಮಾದಕ ವಸ್ತುಗಳ ಚಟುವಟಿಕೆ, ಅಕ್ರಮ ಗೋ ಸಾಗಾಟ ಸೇರಿದಂತೆ ಅಪರಾಧ ಚಟುಚಟಿಕೆಗಳನ್ನು ಮಟ್ಟಹಾಕುಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಇದರಲ್ಲಿ ಯಾವುದೇ ಲೋಪವಾದರೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದ್ದಾರೆ.ದ.ಕ. ಜಿಲ್ಲೆಯ ಶಾಸಕರು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಜತೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ವಿಶೇಷ ಸಭೆಯ ಬಳಿಕ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.ಮಾದಕ ವ್ಯಸನ, ಅಕ್ರಮ ಗೋಸಾಗಾಟ, ಅಕ್ರಮ ಮರಳು ಸಾಗಾಟ ಸೇರಿದಂತೆ ಎಲ್ಲ ರೀತಿಯ ಅಕ್ರಮಗಳಿಗೂ ಕಡಿವಾಣ ಹಾಕ ಬೇಕಾಗಿದೆ.ಜನತೆಯಲ್ಲಿ ವಿಶ್ವಾಸ ಮೂಡಿಸುವ ಕೆಲಸ ತುರ್ತಾಗಿ ಆಗಬೇಕು.
ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ವಿದ್ಯಮಾನಗಳನ್ನು ನಿಗ್ರಹಿಸಲು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಚರ್ಚೆ ನಡೆಸಿ ಸೂಕ್ತ ಮಾರ್ಗದರ್ಶನಗಳನ್ನು ರೂಪಿಸಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ತಿಳಿಸಿದರು. ಕೃಷಿ ಚಟುವಟಿಕೆ ಹಾಗೂ ಸಾಕಾಣಿಕೆಗಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಗೋ ಸಾಗಾಟ ಮಾಡುವುದಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ತಿಳಿಸಬೇಕು. ಅನುಮತಿ ಪಡೆಯದ ಸಾಗಾಟವನ್ನು ಮುಂದಿನ ದಿನದಲ್ಲಿ ಅಕ್ರಮ ಎಂದೇ ಪರಿಗಣಿಸಲಾಗುತ್ತದೆ. ಅನುಮತಿ ಪಡೆದ ಬಳಿಕ ಗೋ ಸಾಗಾಟ ಮಾಡುವಾಗ ಪೊಲೀಸ್ ಭದ್ರತೆ ನೀಡಲಾಗುತ್ತದೆ ಎಂದರು.