ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.28.ಡಾ:ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ, 2019-20ನೇ ಸಾಲಿಗೆ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ದಿಗಾಗಿ ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ, ಮೈಕ್ರೋಕ್ರೆಡಿಟ್(ಪ್ರೇರಣಾ)(ಮಹಿಳಾ ಸ್ವ ಸಹಾಯ ಗುಂಪುಗಳಿಗೆ) ಯೋಜನೆ, ಮತ್ತು ಗಂಗಾ ಕಲ್ಯಾಣ ಯೋಜನೆಗಳಡಿಯಲ್ಲಿ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಲಾಗಿದೆ.


ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು ಹಾಗೂ ಕರ್ನಾಟಕ ರಾಜ್ಯದ ವಾಸಿಯಾಗಿರಬೇಕು. (ಆರ್.ಡಿ.ಸಂಖ್ಯೆ ಇರುವ ತಹಸೀಲ್ದಾರ್‍ರಿಂದ ಪಡೆದಿರುವ ಜಾತಿ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು). ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ರೂ.1.50 ಲಕ್ಷ ಮತ್ತು ನಗರ ಪ್ರದೇಶದಲ್ಲಿ ರೂ . 2 ಲಕ್ಷ ಮಿತಿಯಲ್ಲಿರಬೇಕು.( ಆರ್.ಡಿ.ಸಂಖ್ಯೆ ಇರುವ ತಹಸೀಲ್ದಾರ್‍ರಿಂದ ಪಡೆದಿರುವ) ಆದಾಯ ಪ್ರಮಾಣ ಪತ್ರದ ಪ್ರತಿ ಲಗತ್ತಿಸಿರಬೇಕು. ಅರ್ಜಿದಾರರು 18 ವರ್ಷಕ್ಕೆ ಮೇಲ್ಪಟ್ಟಿರಬೇಕು.(ಆಧಾರ್ ಕಾರ್ಡ್ ಕಡ್ಡಾಯವಾಗಿ ಲಗತ್ತಿಸಿರಬೇಕು).ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು ಮತ್ತು ಸರ್ಕಾರಿ /ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.

ವಾಹನಗಳಿಗೆ ಸೌಲಭ್ಯ ಪಡೆಯಲು ಫಲಾಪೇಕ್ಷಿಗಳು ಡ್ರೈವಿಂಗ್ ಲೈಸೆನ್ಸ್‍ನೊಂದಿಗೆ ಬ್ಯಾಡ್ಜ್ ಹೊಂದಿರಬೇಕು. ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಸ್ವಯಂ ಉದ್ಯೋಗಕ್ಕಾಗಿ ಸಣ್ಣ ಕೈಗಾರಿಕೆ/ಸೇವಾಘಟಕಗಳು / ವ್ಯಾಪಾರ- ವಾಣಿಜ್ಯ ಉದ್ದೇಶಗಳಿಗೆ ರೂ.5 ಲಕ್ಷಗಳವರೆಗಿನ ಘಟಕಗಳಿಗೆ ಶೇ.70ರಷ್ಟು (ಗರಿಷ್ಟ ರೂ.3.50 ಲಕ್ಷ) ಸಹಾಯಧನ, ರೂ.5 ಲಕ್ಷದಿಂದ ರೂ.10 ಲಕ್ಷದವರೆಗಿನ ಘಟಕಗಳಿಗೆ ಶೇ.60ರಷ್ಟು ಸಹಾಯಧನ (ಗರಿಷ್ಟ ರೂ.5 ಲಕ್ಷ) ಮತ್ತು ರೂ.10 ಲಕ್ಷದಿಂದ ರೂ.20 ಲಕ್ಷಗಳವರೆಗಿನ ಘಟಕಗಳಿಗೆ ಶೇ.50ರಷ್ಟು ಸಹಾಯಧನ (ಗರಿಷ್ಟ ರೂ.5 ಲಕ್ಷ ಸಹಾಯಧನ) ನಿಗಮದಿಂದ ಮಂಜೂರು ಮಾಡಲು ಅವಕಾಶವಿರುತ್ತದೆ.

Also Read  ಕಾಸರಗೋಡು: ರಿವಾಲ್ವರ್ ತೋರಿಸಿ ಲಾರಿ ಕಿಡ್ನಾಪ್‌ !

ಘಟಕ ವೆಚ್ಚದ ಉಳಿದ ಭಾಗವನ್ನು ಸಾಲವನ್ನಾಗಿ ಅರ್ಜಿದಾರರು ಸೇವಾ ವ್ಯಾಪ್ತಿಯ ಬ್ಯಾಂಕಗಳಿಂದ ಮಂಜೂರಾತಿ ಪಡೆಯುವ ಷರತ್ತಿಗೆ ಒಳಪಟ್ಟು ಸಹಾಯಧನವನ್ನು ಮಂಜೂರು ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿಗಳ ಕಛೇರಿಯಲ್ಲಿ ಈಗಾಗಲೇ ನೊಂದಣಿ ಮಾಡಿಕೊಂಡಿರುವ ಪರಿಶಿಷ್ಟ ಜಾತಿಯ ಅಂಗವಿಕಲರು ಅರ್ಜಿ ಸಲ್ಲಿಸಿದಲ್ಲಿ ನಿಗಧಿಪಡಿಸಿದ ಒಟ್ಟು ಗುರಿಯಲ್ಲಿ ಶೇ.5ರಷ್ಟು ಮೀಸಲಾತಿಯನ್ನು ನೀಡಿ ಸೌಲಭ್ಯ ಒದಗಿಸಲಾಗುವುದು. ಮೈಕ್ರೊ ಕ್ರೆಡಿಟ್ (ಪ್ರೇರಣಾ) ಯೋಜನೆಯಡಿ ಸ್ವ ಸಹಾಯ ಮಹಿಳಾ ಗುಂಪುಗಳು ಪ್ರತಿನಿಧಿ-1 ಮತ್ತು 2ರ ಬ್ಯಾಂಕ್ ಖಾತೆ ಹಾಗೂ ಸಭೆಗಳು ನಡೆಸಿರುವ ಬಗ್ಗೆ ಸಭಾ ನಡವಳಿಗಳ ಪ್ರತಿಗಳನ್ನು ದೃಢೀಕರಿಸಿ ಸಲ್ಲಿಸಬೇಕು. ಈ ಯೋಜನೆಯಡಿ ಗುಂಪು ಚಟುವಟಿಕೆಗಳಡಿ ಉತ್ಪಾದನೆ ಮತ್ತು ಸೇವಾ ಘಟಕಗಳಿಗೆ ರೂ.2.50 ಲಕ್ಷಗಳವರೆಗೆ ಆರ್ಥಿಕ ಸಹಾಯ ಮಾಡಲಾಗುವುದು.

(ಕನಿಷ್ಟ 10 ಸದಸ್ಯರ ಸ್ವ ಸಹಾಯ ಗುಂಪು ಇರಬೇಕು) ಅರ್ಜಿದಾರರು ಕೊಳವೆ ಬಾವಿ ಸೌಲಭ್ಯ ಪಡೆಯಲು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಕನಿಷ್ಟ 1.20 ರಿಂದ ಗರಿಷ್ಟ 5.00 ಎಕರೆ ಜಮೀನನ್ನು ಹೊಂದಿರಬೇಕು. ಮಲೆನಾಡು ಪ್ರದೇಶಗಳಾದ ಕೊಡಗು, ಚಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಗರಿಷ್ಟ 1.00 ಎಕರೆ ಜಮೀನನ್ನು ಹೊಂದಿರಬೇಕು. ಬೆಂಗಳೂರು (ನ), ಬೆಂಗಳೂರು (ಗ್ರಾ), ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಿಗೆ ಘಟಕ ವೆಚ್ಚ ಮಿತಿ ರೂ.4.50 ಲಕ್ಷಗಳಿದ್ದು, ಉಳಿದ 24 ಜಿಲ್ಲೆಗಳಿಗೆ ರೂ.3.50 ಲಕ್ಷಗಳ ಘಟಕ ವೆಚ್ಚವನ್ನು ನಿಗದಿಪಡಿಸಲಾಗಿದೆ.

Also Read  ಏನೆಕಲ್ಲು : ಬೋರವೆಲ್ ನಲ್ಲಿ ನೀರು ಬಾರದಿದದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

ಅರ್ಜಿಯನ್ನು ದ್ವಿ ಪ್ರತಿಯಲ್ಲಿ ಪೂರ್ಣವಾಗಿ ಭರ್ತಿ ಮಾಡಿ ಸಹಿ ಮಾಡಿರಬೇಕು ಮತ್ತು 2 ಪಾಸ್‍ಪೊರ್ಟ್ ಅಳತೆಯ ಭಾವಚಿತ್ರಗಳು, ಮತದಾರರ ಗುರುತಿನ ಚೀಟಿ/ ಪಡಿತರ ಚೀಟಿ, ಬ್ಯಾಂಕ್ ಉಳಿತಾಯ ಖಾತೆಯ ಪಾಸ್ ಪುಸ್ತಕದ ಪ್ರತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಸೌಲಭ್ಯ ಕೋರಿರುವ ಉದ್ದೇಶಕ್ಕೆ ಅವಶ್ಯವಿರುವ ಇತರೆ ಪೂರಕ ದಾಖಲೆಗಳ ಪ್ರತಿಗಳನ್ನು ಸಲ್ಲಿಸಬೇಕು.ಅರ್ಜಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ತಾಲೂಕು ಅಭಿವೃದ್ಧಿ ಅಧಿಕಾರಿಗಳ ಕಛೇರಿಗೆ ಸಲ್ಲಿಸಿ ಕಡ್ಡಾಯವಾಗಿ ಸ್ವೀಕೃತಿಯನ್ನು ಪಡೆದು ಭದ್ರ ಪಡಿಸಿಕೊಳ್ಳಬೇಕು. ಅರ್ಜಿದಾರರು ಮಧ್ಯವರ್ತಿಗಳನ್ನು ಸಂಪರ್ಕಿಸದಿರುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಕಛೇರಿ ಮತ್ತು ನಿಗಮದ ವೆಬ್ ಸೈಟ್‍ನಲ್ಲಿ ಪಡೆಯಬಹುದು.ಮೇಲ್ಕಂಡ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಪರಿಶಿಷ್ಟ ಜಾತಿಯ ಜನರು ಆಯಾ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ನಿಗದಿಪಡಿಸಿದ ಉಚಿತ ಅರ್ಜಿಗಳನ್ನು ಪಡೆಯಬಹುದು ಅಥಾವಾ ನಿಗಮದ ವೆಬ್‍ಸೈಟ್ www.adcl.karnataka.gov.in   ನಲ್ಲಿ ಮುಖಪುಟದಿಂದ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಕಚೇರಿಗೆ ಆಗಸ್ಟ್ 14 ರೊಳಗೆ ಸಲ್ಲಿಸಬೇಕು. ಅಂತಿಮ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾ ವ್ಯವಸ್ಥಾಪಕರು, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top