ಸಿ.ಪಿ.ಸಿ.ಆರ್.ಐ ಗೆ ಭೂಮಿ ಒತ್ತುವರಿ ಸಂಕಟ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂನ್.27. ಕಿದು ಸುರಕ್ಷಿತಾ ರಣ್ಯದಲ್ಲಿ ಸಂಶೋಧನಾ ಉದ್ದೇಶಕ್ಕಾಗಿ ಗೇಣಿ ನೆಲೆಯಲ್ಲಿ ಪಡೆದಿದ್ದ ಪ್ರದೇಶವನ್ನು ಹಣ ಪಾವತಿಸಿ ನವೀಕರಿಸುವಂತೆ ಅರಣ್ಯ ಇಲಾಖೆ ಬುಧವಾರ ನೋಟಿಸ್‌ ನೀಡಿದೆ, ಇಲ್ಲದಿದ್ದಲ್ಲಿ ಅರಣ್ಯ ಭೂಮಿಯನ್ನು ಹಿಂಪಡೆಯುವುದಾಗಿ ತಿಳಿಸಿದೆ.

ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳು ಜೂ. 26ರಂದು ಹೊರಡಿಸಿರುವ ಸೂಚನೆಯಲ್ಲಿ ಕಿದು ಸುರಕ್ಷಿತಾರಣ್ಯದಲ್ಲಿ ಸಂಶೋಧನ ಉದ್ದೇಶಕ್ಕಾಗಿ ಗೇಣಿ ನೆಲೆಯಲ್ಲಿ ನೀಡಿದ 121.41 ಹೆ. ಭೂಮಿಯನ್ನು ಅರಣ್ಯ ಸಂರಕ್ಷಣ ಕಾಯ್ದೆ 1980ರನ್ವಯ ನವೀಕರಿಸಿ ಮಂಜೂರು ಮಾಡಲಾಗಿದೆ. ಅದರಂತೆ ಸಂಸ್ಥೆ ಯವರು ಎನ್‌ಪಿವಿ ಮತ್ತು ಸಿಎ ಮೊತ್ತವನ್ನು ಪಾವತಿಸಬೇಕಿದೆ. ಇದುವರೆಗೆ ಯಾವುದೇ ಮೊತ್ತ ಪಾವತಿಸಿಲ್ಲ. ಸಂಸ್ಥೆಯು ಎನ್‌ಪಿವಿ ಮೊತ್ತ 12,66,30,630 ರೂ. ಮತ್ತು ಸಿಎ ಮೊತ್ತ 6,60,47,040 ರೂ. ಸೇರಿದಂತೆ ಒಟ್ಟು 19,26,77,670 ರೂ.ಗಳನ್ನು ಮುಂದಿನ 10 ದಿನಗಳೊಳಗೆ ಪಾವತಿಸಬೇಕು. ಇಲ್ಲದಿದ್ದಲ್ಲಿ ಅರಣ್ಯ ಭೂಮಿಯನ್ನು ಹಿಂಪಡೆಯಲಾಗುವುದು ಎಂದಿದೆ.

ಲೀಸಿಗೆ ಪಡೆದ ಭೂಮಿಯನ್ನು ಕಾಲಕಾಲಕ್ಕೆ ನವೀಕರಿಸುವುದು ಅವರ ಜವಾಬ್ದಾರಿ. ಇಲ್ಲವಾದಲ್ಲಿ ಅರಣ್ಯ ಕಾಯ್ದೆಯಂತೆ ಭೂಮಿಯನ್ನು ವಾಪಸ್‌ ಪಡೆಯಲಾಗುತ್ತದೆ ಎಂದು ಎಚ್ಚರಿಸಿದೆ. 1972ರಲ್ಲಿ ಪುತ್ತೂರು ತಾಲೂಕಿನ ಬಿಳಿನೆಲೆ ಗ್ರಾಮದ ಕಿದು ರಕ್ಷಿತಾರಣ್ಯದಲ್ಲಿ 300 ಎಕರೆ ಭೂಮಿಯನ್ನು ಅರಣ್ಯ ಇಲಾಖೆಯಿಂದ 30 ವರ್ಷಗಳ ಅವಧಿಗೆ ಲೀಸಿಗೆ ಪಡೆದು ಅಡಿಕೆ, ತೆಂಗು ಮತ್ತು ಕೊಕ್ಕೊ ಗಿಡಗಳನ್ನು ಬೆಳೆಸಿ ಸಂಶೋಧನ ಉಪಕೇಂದ್ರವನ್ನು ಸ್ಥಾಪಿಸಲಾಗಿತ್ತು. ಇದರ ಅವಧಿ 2000ನೇ ಇಸವಿಗೆ ಮುಗಿದಿದೆ. ಅರಣ್ಯ ಇಲಾಖೆ ಲೀಸಿಗೆ ನೀಡಿದ ಭೂಮಿಯನ್ನು ಮರಳಿ ಪಡೆಯಬೇಕು ಎಂಬ ಸುಪ್ರೀಂ ಕೋರ್ಟಿನ ಆದೇಶದಂತೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದ್ದು, ಜಾಗ ಮರಳಿ ನೀಡುವುದು ಅಥವಾ ಬದಲಾಗಿ 300 ಎಕರೆ ಖಾಲಿ ಜಾಗದಲ್ಲಿ ಅರಣ್ಯ ಬೆಳೆಸಲು ತಗಲುವ 12 ಕೋಟಿ ರೂ. ಭರಿಸಿ ಮತ್ತೆ 30 ವರ್ಷಗಳ ಅವಧಿಗೆ ಲೀಸ್‌ ಮುಂದುವರಿಸಲು ಅವಕಾಶ ಕಲ್ಪಿಸಿತ್ತು.

Also Read  ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರುತ್ತಲೆ ಇದೆ; ಇಂದಿನ ದರ ಎಷ್ಟಿದೆ..!

ಸಿಪಿಸಿಆರ್‌ಐ ಆಡಳಿತವೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ನವೀಕರಣ ಕೋರಿ ಅರ್ಜಿ ಸಲ್ಲಿಸಿತ್ತು. ಅಷ್ಟರಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಸುಪ್ರೀಂ ಕೋರ್ಟ್‌ ಅರಣ್ಯ ಸಂರಕ್ಷಣೆ ವಿಚಾರವಾಗಿ ನೀಡಿದ್ದ ಆದೇಶವನ್ನು ಮುಂದಿರಿಸಿ ನವೀಕರಣಕ್ಕೆ ನಿರಾಕರಿಸಿತ್ತು. ಬದಲಿ ಜಾಗ ಗುರುತಿಸಿ ಅರಣ್ಯ ಅಭಿವೃದ್ಧಿಗೆ 12 ಕೋಟಿ ರೂ. ಭರಿಸುವಂತೆ ಹೇಳಿತ್ತು. ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಸೂಚಿಸಿದ ವಿನಾಯಿತಿ ಪಟ್ಟಿಯಲ್ಲಿ ನಿಮ್ಮ ಸಂಶೋಧನಾ ಕೇಂದ್ರ ಸೇರದೆ ಇರುವುದರಿಂದ ವಿನಾಯಿತಿ ಸಾಧ್ಯವಿಲ್ಲ ಎಂದು ಪರಿಸರ ಇಲಾಖೆ ಸ್ಪಷ್ಟಪಡಿಸಿತ್ತು.ಅನಂತರ ಕೇಂದ್ರದ ಉನ್ನತ ಅಧಿಕಾರಿಗಳು ನಿರಾಸಕ್ತಿತೋರಿದ್ದರು. ಸಂಶೋಧನ ಕೇಂದ್ರ ರಾಜ್ಯದ ಕೈತಪ್ಪುವಸಾಧ್ಯತೆ ಬಗ್ಗೆ ಆತಂಕಗೊಂಡ ಈ ಭಾಗದ ಪ್ರಮುಖರು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಗಮನಕ್ಕೆ ತಂದಿದ್ದರು. ಅವರು ಕೇಂದ್ರ ಕೃಷಿ ಸಚಿವರ ಮೇಲೆ ಒತ್ತಡ ತಂದು ತಾತ್ಕಾಲಿಕವಾಗಿ ತಡೆ ತಂದಿದ್ದರು. ಈಗ ಮತ್ತೆ ಸಂಕಟಕ್ಕೆ ಒಳಗಾಗಿದೆ.

Also Read  ಪಾರ್ಸೆಲ್ ಕಳುಹಿಸುವ ನೆಪದಲ್ಲಿ 7.63 ಲಕ್ಷ ರೂ. ಪಡೆದುಕೊಂಡು ವಂಚನೆ         ➤ ಪ್ರಕರಣ ದಾಖಲು…!!!

error: Content is protected !!
Scroll to Top