(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.27.ಗ್ರಾಮೀಣ ಪ್ರದೇಶದ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಮಾಡಲು 2019-20 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನಾ ಯೋಜನೆಯಡಿಯಲ್ಲಿ ಬ್ಯಾಂಕಿನ ಆರ್ಥಿಕ ಸಾಲದ ಮೂಲಕ ಅವಕಾಶ ಕಲ್ಪಿಸಲಾಗುವುದು.
ಕನಿಷ್ಠ 18 ವರ್ಷ ಹಾಗೂ ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ ಹಾಗೂ ವಿಶೇಷ ವರ್ಗದವರಿಗೆ (ಪರಿಶಿಷ್ಟ ಜಾತಿ/ ಪ.ಪಂಗಡ/ ಹಿಂದುಳಿದವರ್ಗ/ ಅಲ್ಪಸಂಖ್ಯಾತರು/ ಅಂಗವಿಕಲರು/ ಮಾಜಿಸೈನಿಕ/ ಮಹಿಳೆ) ಗರಿಷ್ಠ 45 ವರ್ಷ. ಯಾವುದೇ ಆದಾಯದ ಮಿತಿ ಇರುವುದಿಲ್ಲ. ಪ್ರಥಮ ಪೀಳಿಗೆ ಉದ್ಯಮಶೀಲರಿಗೆ ಮಾತ್ರ ಪ್ರತಿ ಘಟಕಕ್ಕೆ ಗರಿಷ್ಠ ರೂ. 10 ಲಕ್ಷ ಯೋಜನಾ ವೆಚ್ಚದ ಕಿರು ಉತ್ಪಾದನಾ ಘಟಕಗಳನ್ನು ಹಾಗೂ ಸೇವಾ ಉದ್ಯಮಗಳನ್ನು ಪ್ರಾರಂಭಿಸಲು ವಿವಿಧ ಹಣಕಾಸು ಸಂಸ್ಥೆಗಳ ಮೂಲಕ ಸಾಲ ನೀಡಲಾಗುವುದು.
ಯೋಜನಾ ವೆಚ್ಚ ರೂ 5 ಲಕ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಯೋಜನೆಗಳನ್ನು ಸ್ಥಾಪಿಸಲು ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆ 8 ನೇ ತರಗತಿ ಉತ್ತೀರ್ಣರಾಗಿರಬೇಕು. ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದಿಂದ ಸಾಮಾನ್ಯ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇಕಡಾ 25 ರಷ್ಟು( ಗರಿಷ್ಠ ರೂ 250000/ ರ ವರೆಗೆ ) ಹಾಗೂ ವಿಶೇಷ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇಕಡಾ 35 ರಷ್ಟು (ಗರಿಷ್ಠ 350000/ ವರೆಗೆ ) ಸಹಾಯಧನವನ್ನು ನೀಡಲಾಗುವುದು.
ಈ ಯೋಜನೆಯನ್ನು ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ, ಯೆಯ್ಯಾಡಿ ಮಂಗಳೂರು ಹಾಗೂ ಜಿಲ್ಲಾ ಅಧಿಕಾರಿಗಳು ಖಾದಿ ಗ್ರಾಮೋದ್ಯೋಗ ಮಂಡಳಿಗಳ ಮೂಲಕ ಅನುಷ್ಟಾನಗೊಳಿಸಲಾಗುತ್ತಿದ್ದು ಅರ್ಹತೆಯುಳ್ಳ ಆಸಕ್ತ ಯುವಜನರು www.cmegp.kar.nic.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಜುಲೈ 31 ರೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಯೆಯ್ಯಾಡಿ ಮಂಗಳೂರು ಇವರ ಕಚೇರಿ ದೂರವಾಣಿ ಸಂಖ್ಯೆ: 0824-2214021 ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.