(ನ್ಯೂಸ್ ಕಡಬ) newskadaba.com ದಾವಣಗೆರೆ, ಜೂನ್.25.ಸೋಮವಾರ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಾವಣಗೆರೆ ತಾಲೂಕಿನ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಜನಮಂಗಳ ಕಾರ್ಯಕ್ರಮದಡಿ ಸ್ವ ಸಹಾಯ ಸಂಘಗಳ ಸದಸ್ಯರಿಗೆ ವ್ಹೀಲ್ಚೇರ್, ಶಿಷ್ಯವೇತನ, ಆಟೋರಿಕ್ಷಾ ವಿತರಣಾ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಜನರು ಸ್ವಾವಲಂಬಿ ಜೀವನ ನಡೆಸಲು ನೆರವಾಗುತ್ತಿರುವುದು ಶ್ಲಾಘನೀಯ ಎಂದರು.ರಾಜ್ಯದ ಅನೇಕ ಕಡೆಯಲ್ಲಿ ಹಲವಾರು ಸಮಸ್ಯೆಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸೂಕ್ತ ಪರಿಹಾರ ಒದಗಿಸಲಾಗುತ್ತಿದೆ. ಡಾ| ವೀರೇಂದ್ರ ಹೆಗ್ಗಡೆಯವರು ಅದರ ಹಿಂದಿನ ಪ್ರೇರಣಾ ಶಕ್ತಿ. ಜಿಲ್ಲಾ ಪಂಚಾಯತ್‌ನಿಂದ ಒಂದು ಕುಡಿಯುವ ನೀರು ಘಟಕಕ್ಕೆ 12 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಬರೀ 4 ಲಕ್ಷಕ್ಕೇ ಕುಡಿಯುವ ನೀರಿನ ಘಟಕ ಮಾಡುತ್ತಾರೆ. ಅಗ್ಗದ ದರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಡಲಾಗಿದೆ.
ದಾವಣಗೆರೆಯಲ್ಲಿ 25 ಘಟಕಗಳು ಇವೆ ಎಂದು ತಿಳಿಸಿದರು ಉದ್ಯಮಿ ಹಂಸರಾಜ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದಾವಣಗೆರೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಸಹಾಯ ಮಾಡಲಾಗಿದೆ. ಸ್ವಸಹಾಯ ಸಂಘಗಳು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಮಾದರಿ ಆಗಬೇಕು ಎಂದು ಆಶಿಸಿದರು.ಇದೇ ಸಂದರ್ಭದಲ್ಲಿ 34 ಜನರಿಗೆ ವ್ಹೀಲ್ಚೇರ್, 40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 16 ಮಂದಿಗೆ ಆಟೋರಿಕ್ಷಾ, ವಾಟರ್ ಬೆಡ್ ವಿತರಿಸಲಾಯಿತು.ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಶ್ರೀ ದುರ್ಗಾಂಬಿಕಾ ದೇವಸ್ಥಾನ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸ ರೆಡ್ಡಿ, ಮಲ್ಲಿಕಾರ್ಜುನ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಎನ್.ಜಿ. ಚಂದ್ರಶೇಖರ್, ಎಸ್‌ಕೆಡಿಆರ್‌ಡಿಪಿ ನಿರ್ದೇಶಕ ಜಯಂತ್ ಪೂಜಾರಿ, ಯೋಜನಾಧಿಕಾರಿ ಸಿ.ಎಚ್.ಪದ್ಮಯ್ಯ, ಎಚ್.ಬಾಬು, ಸಿದ್ದೇಶ್, ವಿಜೇಂದ್ರ, ವಿಶಾಲ ಇತರರು ಉಪಸ್ಥಿತರಿದ್ದರು.