(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.25.ಕಾನೂನಿನ ವಿರುದ್ಧವಾಗಿ ಭ್ರೂಣ ಲಿಂಗ ಪತ್ತೆ ಮಾಡುವಂತಹ ಸ್ಕ್ಯಾನಿಂಗ್ ಸೆಂಟರ್‍ಗಳ ಮಾಹಿತಿ ನೀಡಿದವರಿಗೆ ರೂ. 10000 ಹಾಗೂ ಪ್ರಶಸ್ತಿ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭ್ರೂಣ ಹತ್ಯೆ ಕಾನೂನು ಬಾಹಿರ ಚಟುವಟಿಕೆಯಾಗಿದ್ದರೂ ಇಂತಹ ಘಟನೆಗಳು ವರದಿಯಾಗುತ್ತಿವೆ. ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಸಾಮಾನ್ಯರಂತೆ ತೆರಳಿ ಪರಿಶೀಲನೆ ನಡೆಸುವಂತೆ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗರ್ಭಿಣಿಯರ ನಿಖರವಾದ ಮಾಹಿತಿಯನ್ನು ಅಂಗನವಾಡಿ ಕೇಂದ್ರದಿಂದ ಪಡೆದುಕೊಳ್ಳಬೇಕು. ಮಾತೃವಂದನಾ ಯೋಜನೆಯಡಿ ಗರ್ಬಿಣಿಯರಿಗೆ ದೊರಕಬೇಕಾದ ಸೌಲಭ್ಯ ಸರಿಯಾದ ರೀತಿಯಲ್ಲಿ ತಲುಪಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಹಾಗೂ ಇಲಾಖಾ ವತಿಯಿಂದ ನಡೆಯುವಂತಹ ಜನಪರ ಕಾರ್ಯಕ್ರಮಗಳ ಕುರಿತು ಆನ್‍ಲೈನ್ ಪ್ರಚಾರ ನಡೆಸಿ ಬಡತನದಲ್ಲಿರುವಂತಹವ ಜನತೆಗೆ ನೇರವಾಗಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕುಟುಂಬದೊಳಗಾಗುವ ಯಾವುದೇ ಬಗೆಯ ಹಿಂಸೆಗೋಳಗಾದ ಮಹಿಳೆಯರಿಗೆ ಸಂಬಂಧಿಸಿದಂತೆ ಹೆಚ್ಚು ಸಂರಕ್ಷಣೆ ಒದಗಿಸುವ ಹಿನ್ನಲೆಯಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ಸಂರಕ್ಷಣಾ ಕಾಯ್ದೆ ಅನುಷ್ಠಾನಗೊಂಡಿದೆ.ದೌರ್ಜನ್ಯಕ್ಕೊಳಗಾದ ಮಹಿಳೆಗೆ ಒಂದೇ ಸೂರಿನಡಿ, ಸಮಗ್ರ ಸೌಲಭ್ಯ( ವೈದೈಕೀಯ, ಪೊಲೀಸ್ ನೆರವು,) ಒದಗಿಸಲು ವಿಶೇಷ ಗೆಳತಿ ಚಿಕಿತ್ಸೆ ಘಟಕದ ಸೌಲಭ್ಯ ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಲೇಡಿಗೋಷನ್ ಆಸ್ಪತ್ರೆಯಲ್ಲಿ ದೊರಕುತ್ತಿದೆ. ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕ್ಕೊಳಗಾದ ಮಹಿಳೆಯರಿಗೆ, ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ನೆರವು ದೊರಕುತ್ತಿದೆ.
ಸಾಗಾಣೆಗೆ ಒಳಪಟ್ಟ ಮಹಿಳೆಯರ ಹಾಗೂ ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಪುನರ್ವಸತಿ ಕೇಂದ್ರಗಳ ಸ್ಥಾಪನೆ, ಹಾಗೂ ಸಂಕಷ್ಠದಲ್ಲಿರುವ ಮಹಿಳೆಯರಿಗೆ ಅಲ್ಪಾವಧಿ ಗೃಹ ಹಾಗೂ ಸಾಂತ್ವನ ಕೇಂದ್ರಗಳ ಸೌಲಭ್ಯ ದೊರಕುತ್ತಿದೆ.ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ ಹಾಗೂ ಮಕ್ಕಳ ರಕ್ಷಣೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಲಾಖಾ ವತಿಯಿಂದ ದೊರಕುವಂತಹ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಜನತೆಗೆ ತಿಳಿಯಪಡಿಸಿ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಸಿಖಂದರ್ ಪಾಶಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಸುಂದರ ಪೂಜಾರಿ, ವೆನ್‍ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ ಮತ್ತಿತರರು ಉಪಸ್ಥಿತರಿದ್ದರು.