(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂನ್.24.ಜೆಡಿಎಸ್ ಸದ್ದಿಲ್ಲದೇ ಚುನಾವಣೆಗೆ ಸಿದ್ಧವಾಗುತ್ತಿದೆಯೇ? ಇಂಥದ್ದೊಂದು ಅನುಮಾನ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಮೂಡಲಾರಂಭಿಸಿದೆ.
ಈ ಬಾರಿ ಚುನಾವಣೆಗೆ ಇನ್ನು 4 ವರ್ಷವಿರುವಾಗಲೇ ಸಭೆ, ಸಮಾವೇಶ, ಜಾತಿವಾರು ಸಮಾವೇಶ ನಡೆಸುತ್ತಿದ್ದು, ರಾಜ್ಯ ರಾಜಕೀಯ ರಂಗದಲ್ಲಿ ಚರ್ಚೆಗೀಡಾಗಿದೆ. ಹಿಂದಿನ ಎಲ್ಲ ಚುನಾವಣೆ ಗಮನಿಸಿದರೆ ಕೊನೇ ಘಳಿಗೆಯಲ್ಲೇ ತಂತ್ರ, ರಣತಂತ್ರ ರೂಪಿಸುತ್ತ ಬಂದಿದೆ. ಆದರೆ, ಜೆಡಿಎಸ್, ಚುನಾವಣೆ ಸೋಲಿನ ಕಹಿ ಅನುಭವವನ್ನು ಮರೆತು ಮುನ್ನುಗ್ಗುತ್ತಿರುವುದು ಕಾಂಗ್ರೆಸ್, ಬಿಜೆಪಿ ವಲಯದಲ್ಲಿ ಅಚ್ಚರಿ ಉಂಟು ಮಾಡಿದೆ.ನಗರ ಸ್ಥಳೀಯ ಸಂಸ್ಥೆಯಲ್ಲಿ ಗೆದ್ದವರಿಗೆ ಅಭಿನಂದನೆ ಸಲ್ಲಿಸುವುದು ಮಾಮೂಲು. ಆದರೆ, ದೇವೇಗೌಡರು ಸೋತವರನ್ನೂ ಕರೆದು ಸಭೆ ಮಾಡಿ ಆತ್ಮಸ್ಥೈರ್ಯ ತುಂಬಿದ್ದು ವಿಶೇಷ.
ಮಹಿಳಾ ಸಮಾವೇಶದ ಪೂರ್ವಭಾವಿ ಸಭೆ, ಉಪ್ಪಾರ ಸಮಾಜದ ಮುಖಂಡರ ಸಭೆ, ಪಾದಯಾತ್ರೆ ಪೂರ್ವ ಸಿದ್ಧತೆ, ಮುಸ್ಲಿಂ ಸಮುದಾಯದ ಸಭೆ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಜೆಡಿಎಸ್ ಕಚೇರಿ ಚಟುವಟಿಕೆಯ ಕೇಂದ್ರವಾಗಿದೆ. ಜೆಡಿಎಸ್ ಕಚೇರಿಯಲ್ಲೇ ಕುಳಿತು ಪಕ್ಷ ಕಟ್ಟುವುದು ನನಗೆ ಗೊತ್ತು ಎನ್ನುತ್ತಿರುವ ದೇವೇಗೌಡರು, ಅಭಿವೃದ್ಧಿ ಹೆಸರಿನಲ್ಲಿ ಕುಮಾರಸ್ವಾಮಿ ಮೂಲಕ ಪಕ್ಷದ ಚಟುವಟಿಕೆ ವಿಸ್ತರಿಸಿಕೊಂಡರೆ, ನಿಖಿಲ್ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ನಕ್ಷೆ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.
‘ಉತ್ತರ ಕರ್ನಾಟಕದ ಜನ ನಮಗೇನು ಮತ ಹಾಕಿದ್ದಾರಾ?’ ಎಂದು ಮುಖ್ಯಮಂತ್ರಿಯಾದ ಹೊಸತರಲ್ಲಿ ಆಡಿದ ಮಾತು ಲೋಕಸಭೆ ಚುನಾವಣೆಯಲ್ಲಿ ಏಟು ಕೊಟ್ಟಿದೆ. ಈ ಡ್ಯಾಮೇಜ್ ಕಂಟ್ರೋಲ್ ಮಾಡುವ ದೃಷ್ಟಿಯಿಂದಲೇ ಕುಮಾರಸ್ವಾಮಿ ಉತ್ತರ ಕರ್ನಾಟಕದಿಂದ ಗ್ರಾಮ ವಾಸ್ತವ್ಯ ಆರಂಭಿಸಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಈಗಾಗಲೇ ಜಗನ್ ಭೇಟಿ ಮಾಡಿರುವ ನಿಖಿಲ್ ಅವರಂತೆ ಪಾದಯಾತ್ರೆ ನಡೆಸಿ ಜನಮನದಲ್ಲಿ ಪಕ್ಷದ ಅಲೆ ಸೃಷ್ಟಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಪಕ್ಷ ಸಂಘಟನೆ ಭಾಗವಾಗಿ 7-8 ಸಾವಿರ ಕಿ.ಮೀ. ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.