(ನ್ಯೂಸ್ ಕಡಬ) newskadaba.com ಪುತ್ತೂರು, ಜೂನ್.21. ಜೂ. 20ರಂದು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಲಂಚ ಸ್ವೀಕರಿಸಿದ ಆರೋಪದ ಮೇಲೆ ಪುತ್ತೂರು ತಹಶೀಲ್ದಾರ್ ಡಾ| ಪ್ರದೀಪ್ ಕುಮಾರ್ ಅವರನ್ನು ಬಂಧಿಸಿದರು. ಚುನಾವಣಾಕರ್ತವ್ಯದ ಸಿಬಂದಿಗೆ ಆಹಾರ ಪೂರೈಕೆಗೆ ಸಂಬಂಧಿಸಿದ ಬಿಲ್‌ಗೆ ಸಂಬಂಧಿಸಿ ಕ್ಯಾಟರಿಂಗ್‌ನವರಿಂದ ಲಂಚ ಸ್ವೀಕರಿಸಿದಾಗ ಬಲೆಗೆ ಬಿದ್ದಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭ ಕಂದಾಯ ಇಲಾಖೆ ಹಾಗೂ ಇತರ ಚುನಾ ವಣಾ ಕರ್ತವ್ಯದ ಸಿಬಂದಿಗೆ ಮಾ. 30ರಿಂದ ಎ. 18ರ ತನಕ ತರಬೇತಿ ಆಯೋಜಿಸಿದ್ದು ಅವರಿಗೆ ಪುತ್ತೂರಿನ ಪೈ ಕ್ಯಾಟರರ್ ಮೂಲಕ ಊಟ, ಉಪಾಹಾರ ಪೂರೈಸಲಾಗಿತ್ತು. ಅದರ ಒಟ್ಟು ಬಿಲ್ 9.39 ಲಕ್ಷ ರೂ. ಆಗಿತ್ತು.ಕ್ಯಾಟರಿಂಗ್‌ನವರಿಗೆ ಬಿಲ್ ಪಾವತಿ ಸಂದರ್ಭ ತಹಶೀಲ್ದಾರ್ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು. ಕ್ಯಾಟರಿಂಗ್‌ವರು ಅದಾಗಲೇ 99 ಸಾವಿರ ರೂ.ಗಳನ್ನು ತಹಶೀಲ್ದಾರ್‌ಗೆ ಲಂಚವಾಗಿ ಪಾವತಿಸಿದ್ದರು. 1.24 ಲಕ್ಷ ರೂ. ಮತ್ತೆ ನೀಡುವಂತೆ ಕ್ಯಾಟರಿಂಗ್‌ನವರಿಗೆ ತಮ್ಮ ಅಧೀನ ಅಧಿಕಾರಿಗಳ ಮೂಲಕ ದೂರವಾಣಿ ಕರೆ ಮಾಡಿಸಿ ಒತ್ತಡ ಹೇರಿದ್ದರು. ಇದರಿಂದ ಬೇಸೆತ್ತ ಕ್ಯಾಟರಿಂಗ್‌ನವರು ಎಸಿಬಿಗೆ ದೂರು ನೀಡಿದ್ದರು.
ಲಂಚಕ್ಕಾಗಿ ತಹಶೀಲ್ದಾರ್ ಪೀಡಿಸುತ್ತಿರುವುದನ್ನು ಖಚಿತಪಡಿಸಿಕೊಂಡ ಎಸಿಬಿ ಅಧಿಕಾರಿಗಳು ಜೂ. 20ರಂದು ಸಂಜೆ ಪುತ್ತೂರಿನಲ್ಲಿ ಕಾರ್ಯಾಚರಣೆ ನಡೆಸಿದರು.ನಂತರ ತನಿಖೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಹಶೀಲ್ದಾರ್ ಅವರನ್ನು ರಾತ್ರಿ ಮಂಗಳೂರು ನ್ಯಾಯಾಧೀಶರ ಎದುರು ಹಾಜರುಪಡಿಸಲು ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ.ಭ್ರಷ್ಟಾಚಾರ ನಿಗ್ರಹದ ಎಸ್ಪಿ ಉಮಾಪ್ರಶಾಂತ್ ನಿರ್ದೇಶನದಲ್ಲಿ ಡಿವೈಎಸ್ಪಿ ಮಂಜುನಾಥ ಕೌರಿ, ಇನ್ಸ್‌ಪೆಕ್ಟರ್‌ಗಳಾದ ಯೋಗೀಶ್ ಕುಮಾರ್, ಮೋಹನ್ ಕೊಟ್ಟಾರಿ, ಸಿಬಂದಿ ಹರಿಪ್ರಸಾದ್, ಉಮೇಶ್, ರಾಧಾಕೃಷ್ಣ ಕೆ., ರಾಧಾಕೃಷ್ಣ ಡಿ., ವೈಶಾಲಿ, ಪ್ರಶಾಂತ್, ಗಣೇಶ್, ರಿತೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.