(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್ 19ಹೆದ್ದಾರಿ ಬದಿ, ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ತ್ಯಾಜ್ಯ ಚೆಲ್ಲುವುದನ್ನು ನಿಯಂತ್ರಿಸಲು ದ.ಕ.ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಕರಾವಳಿಯಲ್ಲಿ ಅರಣ್ಯ ಪ್ರದೇಶಕ್ಕೆ ತಾಗಿಕೊಂಡಿರುವ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕ್ರಮಕ್ಕೆ ಸೂಚಿಸಿದೆ.
ಇದಕ್ಕೆ ಮುನ್ನುಡಿಯಾಗಿ ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿ ಬಳಿ ಮೀಸಲು ಅರಣ್ಯ ಪ್ರದೇಶದಲ್ಲಿ ರಸ್ತೆ ಇಕ್ಕೆಲಗಳಲ್ಲಿ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಬರುವ ಪೆರಿಯಶಾಂತಿ ಭಾಗದಲ್ಲಿ ಪ್ರವಾಸಿಗರು, ಪ್ರಯಾಣಿಕರು ಹೆಚ್ಚಾಗಿರುವ ಕಾರಣ ಅನಧಿಕೃತ ಅಂಗಡಿಗಳು ಹೆಚ್ಚಿವೆ ಪೆರಿಯಶಾಂತಿಯಲ್ಲಿಯಂತೂ ಪ್ಲಾಸ್ಟಿಕ್ ಸೇರಿದಂತೆ ಹಲವು ಅಪಾಯಕಾರಿ ತ್ಯಾಜ್ಯಗಳನ್ನು ಮೀಸಲು ಅರಣ್ಯದಲ್ಲಿ ಚೆಲ್ಲಲಾಗುತ್ತಿತ್ತು.
ಇದನ್ನು ಗಮನಿಸಿದ್ದ ಮಂಗಳೂರಿನ ರಾಷ್ಟ್ರೀಯ ಪರಿಸರ ಸೇವಾ ಪ್ರತಿಷ್ಠಾನದ(ಎನ್‌ಇಸಿಎಫ್) ಸಂಚಾಲಕ ಶಶಿಧರ ಶೆಟ್ಟಿ ಅರಣ್ಯ ಇಲಾಖೆ ವರದಿ ಆಧರಿಸಿ ಜಿ.ಪಂ.ಸಿಇಒಗೆ ದೂರು ನೀಡಿದರು. ಅದರಂತೆ ಸಿಇಒ ಪುತ್ತೂರು ತಾ.ಪಂ.ಕಾರ್ಯನಿರ್ವಹಣಾಧಿಕಾರಿಯವರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.ಯಾತ್ರಿಕರು, ಪ್ರಯಾಣಿಕರು, ಪ್ರವಾಸಿಗರು ಅಂಗಡಿಗಳೂ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ಚೆಲ್ಲುತ್ತಿವೆ. ಜಿ.ಪಂ.ಸಿಇಒ ಅವರ ಆದೇಶ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕಟ್ಟುನಿಟ್ಟಾಗಿ ಜಾರಿ ಆಗಬೇಕು. ತ್ಯಾಜ್ಯ ಚೆಲ್ಲುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಎಲ್ಲ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.