ಚರಂಡಿ, ದಾರಿದೀಪ ಅಳವಡಿಕೆ ಕಾಮಗಾರಿ ಶೀಘ್ರ ನಡೆಸಲು ಮನವಿ ➤ಸಮಸ್ಯೆ ಪರಿಹಾರವಾಗದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂನ್.19ಮಳೆಗಾಲ ಆರಂಭವಾದರೂ 34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇನ್ನೊಂದೆಡೆ ದಾರಿ ದೀಪಗಳು ಉರಿಯುತ್ತಿಲ್ಲ. ಆದ್ದರಿಂದ 10 ದಿನದೊಳಗೆ ಪಂಚಾಯತ್ ವ್ಯಾಪ್ತಿಯಲ್ಲಿ ಚರಂಡಿ ಹಾಗೂ ದಾರಿ ದೀಪ ಅಳವಡಿಕೆ ಕಾಮಗಾರಿ ಆರಂಭಿಸದಿದ್ದಲ್ಲಿ ಜೂ.27ರಂದು ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ನಮ್ಮೂರು- ನೆಕ್ಕಿಲಾಡಿ ಸಂಘಟನೆ ಎಚ್ಚರಿಕೆ ನೀಡಿದೆ.


ಈ ಬಗ್ಗೆ ಜೂ. 17ರಂದು 34ನೇ ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅವರಿಗೆ ಮನವಿ ನೀಡಿದ ನಮ್ಮೂರು- ನೆಕ್ಕಿಲಾಡಿ ಹಾಗೂ ಗ್ರಾಮಸ್ಥರನ್ನೊಳಗೊಂಡ ನಿಯೋಗವು, ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ಕಡೆ ಚರಂಡಿಗಳು ಗಿಡಗಂಟಿಗಳಿಂದ ಆವರಿಸಿದ್ದು, ಹೂಳು ತುಂಬಿ ಮಳೆ ನೀರು ಹರಿದು ಹೋಗದ ಪರಿಸ್ಥಿತಿಯಿದೆ. ಇನ್ನು ಕೆಲವು ಕಡೆ ಗ್ರಾ.ಪಂ.ನ ರಸ್ತೆ ಬದಿ ಚರಂಡಿಯೇ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ಹೋಗುವಂತಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ದಾರಿ ದೀಪ ವ್ಯವಸ್ಥೆ ಕೂಡಾ ಸಮರ್ಪಕವಾಗಿಲ್ಲ. ಇಲ್ಲಿನ ಶೇ. 90 ರಷ್ಟು ಕಡೆ ದಾರಿ ದೀಪಗಳು ಉರಿಯುತ್ತಿಲ್ಲ.

Also Read  ಸಿಎಂ ಮೀನಿನ ಖಾದ್ಯ ಸೇವಿಸಿ ಧರ್ಮಸ್ಥಳ ಭೇಟಿ ► ಹೊಸ ವಿವಾದ ಸೃಷ್ಟಿಸಿದ ಮಾಂಸಾಹಾರ ಸೇವನೆ

ಹಲವು ಕಡೆ ದಾರಿ ದೀಪಗಳನ್ನೇ ಅಳವಡಿಸಿಲ್ಲ. ಈಗಾಗಲೇ ಮಳೆಗಾಲ ಆರಂಭವಾಗಿದ್ದು, 34 ನೇ ನೆಕ್ಕಿಲಾಡಿಯು ಕುಮಾರಧಾರ ಹಾಗೂ ನೇತ್ರಾವತಿ ನದಿ ತೀರದಲ್ಲಿ ಇರುವುದರಿಂದ ಇದು ನೆರೆ ಬಾಧಿತ ಪ್ರದೇಶವೂ ಹೌದು. ಆದರೆ ಮಳೆಗಾಲಕ್ಕೆ ಪೂರ್ವಭಾವಿಯಾಗಿ ಆಗಬೇಕಾದ ಕೆಲಸ ಗ್ರಾ.ಪಂ. ವ್ಯಾಪ್ತಿಯಲ್ಲಿ ಇನ್ನೂ ಆಗದಿರುವುದರಿಂದ ಜನತೆ ತೀವ್ರ ಸಮಸ್ಯೆಯನ್ನೆದುರಿಸುವಂತಾಗಿದೆ. ಆದ್ದರಿಂದ ತಕ್ಷಣವೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಚರಂಡಿ ನಿರ್ಮಾಣ, ಸ್ವಚ್ಛತೆ ಹಾಗೂ ದಾರಿ ದೀಪ ಅಳವಡಿಕೆ ಕಾಮಗಾರಿಯನ್ನು ನಡೆಸಬೇಕು.

ತಪ್ಪಿದ್ದಲ್ಲಿ ಜೂ. 27ರ ಗುರುವಾರದಂದು ಬೆಳಗ್ಗೆ 11 ಗಂಟೆಗೆ 34 ನೇ ನೆಕ್ಕಿಲಾಡಿ ಗ್ರಾ.ಪಂ. ಮುಂದೆ ಗ್ರಾಮಸ್ಥರನ್ನು ಕ್ರೂಢೀಕರಿಸಿಕೊಂಡು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದೆ.ಮನವಿ ನೀಡಿದ ನಿಯೋಗದಲ್ಲಿ ನಮ್ಮೂರು- ನೆಕ್ಕಿಲಾಡಿ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್, ಸಂಘಟನಾ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ, ಜೊತೆ ಕಾರ್ಯದರ್ಶಿಗಳಾದ ವಿನೀತ್ ಶಗ್ರಿತ್ತಾಯ, ಅಝೀಝ್ ಪಿ.ಟಿ., ಸದಸ್ಯ ಖಲಂದರ್ ಶಾಫಿ, ಗ್ರಾಮಸ್ಥರಾದ ಪ್ರಕಾಶ್ ಆದರ್ಶನಗರ, ಯು.ಕೆ. ಉಸ್ಮಾನ್ ಕೊಡಿಪ್ಪಾಡಿ, ಶರೀಫ್ ಕರ್ವೇಲು, ಸಲೀಂ ಕೊಡಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

Also Read  ಮಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿ

error: Content is protected !!
Scroll to Top