(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.18.ಸಾಮಾನ್ಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನ ಊಟಕ್ಕೆ ಕುಚ್ಚಲಕ್ಕಿ ಅನ್ನ ಬಳಸುತ್ತಾರೆ.ಆದರೆ ಕಳೆದ ಆರು ತಿಂಗಳಿಂದ ಕರಾವಳಿಯ ಪಡಿತರ ಚೀಟಿ ಗ್ರಾಹಕರಿಗೆ ಕುಚ್ಚಲಕ್ಕಿ ಪೂರೈಕೆಯಾಗಿಲ್ಲ.
ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು ಸುಮಾರು 1.30 ಲಕ್ಷ ಕ್ವಿಂಟಾಲ್ ಅಕ್ಕಿ ಬೇಡಿಕೆ ಇದೆ. ಗ್ರಾಹಕರು ಕುಚ್ಚಲಕ್ಕಿ ಬದಲು ಬೆಳ್ತಿಗೆ ಅಕ್ಕಿ ಪಡೆಯುವುದು ಅನಿವಾರ್ಯವಾಗಿದೆ.ಎಫ್‌ಸಿಐ (ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ) ಗೋದಾಮಿನಿಂದ ರಾಜ್ಯದ ಆಹಾರ ಇಲಾಖೆಗೆ ಅಕ್ಕಿ, ಗೋಧಿ ಸಹಿತ ಇತರ ಆಹಾರ ಧಾನ್ಯಗಳು ಪೂರೈಕೆಯಾಗುತ್ತಿವೆ. ಆಹಾರ ಇಲಾಖೆ ಇದನ್ನು ಆಯಾ ಜಿಲ್ಲೆಗಳ ನ್ಯಾಯಬೆಲೆ ಅಂಗಡಿಗಳಿಗೆ ರವಾನಿಸುತ್ತದೆ. ದ.ಕ ಜಿಲ್ಲೆ ಸಹಿತ ಕರ್ನಾಟಕದಲ್ಲಿ ಭತ್ತದ ಬೆಳೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.ಕರಾವಳಿಯ ಪಡಿತರ ಗ್ರಾಹಕರಿಗೆ ಕುಚ್ಚಲಕ್ಕಿ ನೀಡಬೇಕೆಂದು ಸರ್ಕಾರ ಸೂಚಿಸಿದ್ದರೂ ಆಹಾರ ಇಲಾಖೆಗೆ ಸಾಕಷ್ಟು ಪ್ರಮಾಣದಲ್ಲಿ ಕುಚ್ಚಲಕ್ಕಿ ದೊರೆಯುತ್ತಿಲ್ಲ.
ದಾಸ್ತಾನು ಇಲ್ಲದ ಕಾರಣ ಎಫ್‌ಸಿಐ ಬೆಳ್ತಿಗೆ ಅಕ್ಕಿಯನ್ನೇ ಪೂರೈಸುತ್ತಿದೆ. ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕಡು ಬಡವರಿಗೆ ಪ್ರತಿ ತಿಂಗಳು ಒಂದು ಕಾರ್ಡ್‌ಗೆ 35 ಕೆ.ಜಿ ಅಕ್ಕಿ ಹಾಗೂ ಬಿಪಿಎಲ್ ಕಾರ್ಡ್‌ನಲ್ಲಿ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 7 ಕೆ.ಜಿ ಅಕ್ಕಿ ಉಚಿತವಾಗಿ ಸರ್ಕಾರ ನೀಡುತ್ತಿದೆ. ದ.ಕ ಜಿಲ್ಲೆಯಲ್ಲಿ 1,56,170 ಎಪಿಎಲ್ ಕಾರ್ಡ್ ನೀಡಲಾಗಿದ್ದು, ಈ ಪೈಕಿ 68 ಸಾವಿರ ಕುಟುಂಬಗಳು ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ. ಉಡುಪಿಯಲ್ಲಿ ಸುಮಾರು 12 ಸಾವಿರ ಕುಟುಂಬಗಳು ಈ ಸೌಲಭ್ಯ ಪಡೆಯುತ್ತಿವೆ.ದ.ಕ ಜಿಲ್ಲೆಯ ಅಂತ್ಯೋದಯ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ 70,970 ಕ್ವಿಂಟಾಲ್ ಮತ್ತು ಎಪಿಎಲ್ ಕಾರ್ಡ್‌ನವರಿಗೆ 6,538 ಕ್ವಿಂಟಾಲ್ ಅಕ್ಕಿ ಪ್ರತಿ ತಿಂಗಳು ಬೇಡಿಕೆ ಇದೆ.
ಗ್ರಾಹಕರು ನ್ಯಾಯಬೆಲೆ ಅಂಗಡಿಯಿಂದ ಉಚಿತವಾಗಿ ಪಡೆದು ಅಂಗಡಿಗಳಿಗೆ ಮಾರಾಟ ಮಾಡುವ ಪ್ರಕರಣಗಳೂ ನಡೆಯುತ್ತಿವೆ.ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ, ಸರ್ಕಾರಿ ಹಾಸ್ಟೆಲ್ ಮತ್ತು ಕಲ್ಯಾಣ ಸಂಸ್ಥೆಗಳಿಗೆ ಮಾತ್ರ ಈಗ ಕುಚ್ಚಲಕ್ಕಿ ಪೂರೈಕೆಯಾಗುತ್ತಿದೆ. ದ.ಕ ಜಿಲ್ಲೆಯಲ್ಲಿ ಈ ತಿಂಗಳು ಬಿಸಿಯೂಟಕ್ಕೆ 3,476 ಕ್ವಿಂಟಾಲ್, ಕಲ್ಯಾಣ ಸಂಸ್ಥೆಗಳಿಗೆ 513 ಕ್ವಿಂಟಾಲ್ ಮತ್ತು ಸರ್ಕಾರಿ ಹಾಸ್ಟೆಲ್‌ಗಳಿಗೆ 1825 ಕ್ವಿಂಟಾಲ್ ಕುಚ್ಚಲಕ್ಕಿ ಪೂರೈಕೆಯಾಗಿದೆ.ರಾಜ್ಯದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಕುಚ್ಚಲಕ್ಕಿಗೆ ಬೇಡಿಕೆ ಇದೆ. ಆದರೆ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದಿಂದ ಬೇಡಿಕೆ ಇರುವಷ್ಟು ಕುಚ್ಚಲಕ್ಕಿ ಪೂರೈಕೆಯಾಗುತ್ತಿಲ್ಲ. ಕಳೆದ 6 ತಿಂಗಳಿಂದ ಕುಚ್ಚಲಕ್ಕಿ ಪೂರೈಕೆಯಾಗದ ಕಾರಣ ಎಲ್ಲ ಪಡಿತರ ಗ್ರಾಹಕರಿಗೆ ಬೆಳ್ತಿಗೆ ಅಕ್ಕಿ ನೀಡಲಾಗುತ್ತಿದೆ.