(ನ್ಯೂಸ್ ಕಡಬ) newskadaba.com. ಆರೋಗ್ಯ ಮಾಹಿತಿ:ಪದೇಪದೆ ಕಾಡುವ ಮಲಬದ್ಧತೆಗೆ ಕಡಿಮೆ ಪ್ರಮಾಣದಲ್ಲಿರುವಾಗ ಮನೆಯಲ್ಲಿಯೇ ಸರಳ ಉಪಾಯಗಳಿಂದ ನಿರ್ವಹಿಸಬಹುದು.ಮಲದ್ವಾರದ ಹೊರಗಡೆ ಅನುಭವಕ್ಕೆ ಬರುತ್ತಿರುವ ಮೂಲವ್ಯಾಧಿ ಗಡ್ಡೆಗೆ ಬೆರಳುಗಳ ಸಹಾಯದಿಂದ ಅಲೋವೆರಾ ಜೆಲ್ನ್ನು ಪ್ರತಿದಿನ ಮಲವಿಸರ್ಜನೆ ನಂತರ ಹಚ್ಚಬೇಕು.
ಹಿಪ್ಬಾತ್ ಟಬ್ನಲ್ಲಿ ಉಗುರುಬಿಸಿ ನೀರು ತುಂಬಿಸಿ ಇದಕ್ಕೆ 100 ಮಿ. ಆಪಲ್ ಸಿಡೆರ್ ವಿನೆಗರ್ ಸೇರಿಸಿ ಟಬ್ನಲ್ಲಿ 20-30 ನಿಮಿಷ ಕುಳಿತುಕೊಳ್ಳುವುದು ಅನುಕೂಲಕರ. 5-6 ಚಮಚ ತ್ರಿಫಲಾ ಪುಡಿಯನ್ನು ಕುದಿಸಿ ಕಷಾಯ ತಯಾರಿಸಿ ಅರ್ಧ ಹಿಪ್ ಬಾತ್ ಟಬ್ಗೆ ಉಗುರುಬಿಸಿ ನೀರು ತುಂಬಿಸಿ ಈ ಕಷಾಯ ಹಾಕಿ 20 ನಿಮಿಷ ಕುಳಿತುಕೊಳ್ಳಬೇಕು. ಅರ್ಧ ಚಮಚ ಅರಿಶಿಣ ಪುಡಿಗೆ ಒಂದು ಚಮಚ ತುಪ್ಪ ಸೇರಿಸಿ ಬೆರಳುಗಳ ಸಹಾಯದಿಂದ ಪ್ರತಿದಿನ ಎರಡು ಬಾರಿ ಮೂಲವ್ಯಾಧಿ ಗಡ್ಡೆಗೆ ಹಚ್ಚುವುದರಿಂದ ಶೀಘ್ರ ಶಮನ.
ಒಂದು ಹತ್ತಿಉಂಡೆಯನ್ನು ಶುದ್ಧ ಬಾದಾಮಿ ಎಣ್ಣೆಯಲ್ಲಿ ಅದ್ದಿ ತೊಂದರೆಯಾದ ಜಾಗದಲ್ಲಿ 30-40 ನಿಮಿಷ ಇಟ್ಟುಕೊಳ್ಳುವುದು ಉತ್ತಮ ಚಿಕಿತ್ಸೆ. ರಕ್ತಸ್ರಾವ ಇದ್ದಾಗ ಐಸ್ಪ್ಯಾಕ್ ಇಡುವುದು ತ್ವರಿತವಾಗಿ ಶಮನ ನೀಡುವುದು. ವರ್ಜಿನ್ ತೆಂಗಿನ ಎಣ್ಣೆಯನ್ನು ತೊಂದರೆ ಇರುವ ಭಾಗಕ್ಕೆ ದಿನನಿತ್ಯ 2-3 ಬಾರಿ ಹಚ್ಚುವುದು ಒಳಿತು. ಮಲದ್ವಾರದ ಭಾಗದಲ್ಲಿ ಬೀಳುವ ಹೆಚ್ಚಾದ ಒತ್ತಡದಿಂದಾಗಿ ರಕ್ತನಾಳಗಳು ಉಬ್ಬಿ, ಈ ಭಾಗದಲ್ಲಿ ಅತಿಯಾದ ನೋವು, ತುರಿಕೆ, ಮಲವಿಸರ್ಜನೆ ನಂತರ ತಡೆಯಲಾರದ ನೋವು, ಮಲವಿಸರ್ಜಿಸಿದಾಗ ರಕ್ತ ಬೀಳುವುದು ಮುಂತಾದ ಚಿಹ್ನೆಗಳು ಮೂಲವ್ಯಾಧಿಯಲ್ಲಿ ಕಂಡುಬರುತ್ತವೆ.
ಇದರಲ್ಲಿ ಹಲವಾರು ವಿಧ. ಇಂಟರ್ನಲ್ ಮೂಲವ್ಯಾಧಿ, ಪ್ರೊಲಾಪ್ಸ್ ಮೂಲವ್ಯಾಧಿ, ಎಕ್ಸ್ಟರ್ನಲ್ ಮೂಲವ್ಯಾಧಿ, ಥ್ರೋಂಬೋಸ್ಟ್ ಮೂಲವ್ಯಾಧಿ – ಹೀಗೆ ಹಲವಾರು ವಿಧಗಳು.ಸಾಮಾನ್ಯವಾಗಿ ಗಡ್ಡೆಯ ರೀತಿಯಲ್ಲಿ ಅನುಭವಕ್ಕೆ ಬರುವ ಎಕ್ಸ್ಟರ್ನಲ್ ಮೂಲವ್ಯಾಧಿ ಹೆಚ್ಚು ಕಂಡುಬರುತ್ತದೆ. ಇಂದು ಮೂಲವ್ಯಾಧಿ ಹೆಚ್ಚಾಗುತ್ತಿರಲು ಕೆಲವು ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು. ಅತಿತೂಕ, ಮಲಬದ್ಧತೆ, ಕಡಿಮೆ ನೀರು ಸೇವನೆ, ಜಂಕ್ಫುಡ್ ಸೇವನೆ, ನಾರಿನಂಶ ಇಲ್ಲದ ಆಹಾರಸೇವನೆ, ತುಂಬ ಸಮಯ ಕುಳಿತೇ ಕೆಲಸ ಮಾಡುವುದು, ಗರ್ಭವತಿಯಾದ ಸಂದರ್ಭ ಹಾಗೂ ಪ್ರಸವದ ನಂತರ ಅನೇಕ ಬಾರಿ, ವಯಸ್ಸಹಜ ಪರಿಸ್ಥಿತಿಗಳು.
ಮೂಲವ್ಯಾಧಿ ಹೊರಗಡೆ ಗಡ್ಡೆ ರೀತಿ ಇದ್ದು, ತುಂಬ ತೊಂದರೆ ಆಗುತ್ತಿದ್ದಲ್ಲಿ ಆಯುರ್ವೆದ ಶಾಸ್ತ್ರದ ಕ್ಷಾರಸೂತ್ರ ಉಪಯುಕ್ತ ಚಿಕಿತ್ಸೆ. ಏರೋಬಿಕ್ ವ್ಯಾಯಾಮ, ಸೂರ್ಯನಮಸ್ಕಾರ, ಕಿಬ್ಬೊಟ್ಟೆ, ಹೊಟ್ಟೆಯ ಭಾಗಕ್ಕೆ ವ್ಯಾಯಾಮ ಸೂಕ್ತ. ಮೂಲಬಂಧಾಸನ, ಶೀರ್ಷಾಸನ, ಸರ್ವಾಂಗಾಸನ, ಪಾದಹಸ್ತಾಸನ, ವಜ್ರಾಸನ, ಪಶ್ಚಿಮೋತ್ಥಾನಾಸನ, ಮಯೂರಾಸನ ಉತ್ತಮ ಫಲಿತಾಂಶ ನೀಡಬಹುದಾದ ಆಸನಗಳು. ಶವಾಸನದ ನಂತರ ಭಸ್ತ್ರೀಕಾ, ಅನುಲೋಮ-ವಿಲೋಮ, ಪ್ರಾಣಾಯಾಮ ಸಹಕಾರಿ. ಅಶ್ವಿನಿಮುದ್ರೆ ಉಪಯುಕ್ತ. ಆಹಾರದಲ್ಲಿ ಇಸಬ್ಗೋಲ್, ದ್ರವಾಹಾರ, ಹಣ್ಣುಗಳು, ಬೇಯಿಸಿದ ತರಕಾರಿ, ಕೊಬ್ಬರಿ ಎಣ್ಣೆ, ತುಪ್ಪ, ಸೊಪ್ಪಿನ ಪಲ್ಯ ಮುಂತಾದವುಗಳನ್ನು ಹೆಚ್ಚು ಬಳಸಬೇಕು. ಮೂಲಂಗಿರಸ ಉತ್ತಮ. ಬೆಳಗಿನ ವೇಳೆ ರಾತ್ರಿ ನೆನೆಸಿದ ಅಂಜೂರದ ಸೇವನೆ, ಬೂದುಗುಂಬಳ ಬೀಜ, ತೆಂಗಿನಕಾಯಿ ಹಾಲು, ಕಾಮಕಸ್ತೂರಿ ಬೀಜ ಮಿಶ್ರಣ – ಹೀಗೆ ಉತ್ತಮ ಸರಳ ಆಹಾರೌಷಧಿಗಳಿಂದ ಶಮನ ಸಾಧ್ಯ.