(ನ್ಯೂಸ್ ಕಡಬ) newskadaba.com ಕಡಬ, ಜೂನ್.12.ಕುಂತೂರು ಹಿ.ಪ್ರಾ. ಶಾಲೆಯ ಶಾಲಾ ಸಂಪರ್ಕ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ.ಮುಖ್ಯಮಂತ್ರಿ ಶಾಲಾ ಸಂಪರ್ಕ ಸೇತು ಯೋಜನೆಯಡಿ ತಾವು ಶಾಲೆಗೆ ಹೋಗುವ ದಾರಿಯಲ್ಲಿ ಸಿಗುವ ತೊರೆಗೆ ಸೇತುವೆ ನಿರ್ಮಿಸಿ ಕೊಟ್ಟದ್ದಕ್ಕಾಗಿ ಪುತ್ತೂರಿನ ಕುಂತೂರು ಉನ್ನತೀಕರಿಸಿದ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಸಿಎಂ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಶಾಲಾ ಸಂಪರ್ಕ ಸೇತು ನಿರ್ಮಾಣವಾಗಿದ್ದು, ಇದರ ಅನುಷ್ಠಾನದ ಕುರಿತು ಸ್ಥಳೀಯರ ಅಭಿಪ್ರಾಯ ತಿಳಿಯುವ ನಿಟ್ಟಿನಲ್ಲಿ ಮಂಗಳವಾರ ಸಿಎಂ ಅವರು ವಿದ್ಯಾರ್ಥಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಆಯೋಜಿಸಿದ್ದರು.ಪುತ್ತೂರು ತಾಲೂಕಿನ (ಪ್ರಸ್ತುತ ಕಡಬ) ಪೆರಾಬೆ ಗ್ರಾ.ಪಂ. ವ್ಯಾಪ್ತಿಯ ಕುಂತೂರು ಉನ್ನತೀಕರಿಸಿದ ಹಿ.ಪ್ರಾ. ಶಾಲೆಗೆ ಸಂಬಂಧಿಸಿ ಕುಂತೂರು ಮಜಲು ಅರ್ಬಿಯಲ್ಲಿ 10.10 ಲಕ್ಷ ರೂ. ಅನುದಾನದಲ್ಲಿ ಕಾಲು ಸಂಕ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಆ ಶಾಲೆಯ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಪರವಾಗಿ ಶಿಕ್ಷಕ ಜಿ.ಪಿ. ಜಯಪ್ರಕಾಶ್ ರೈ ಅರ್ಬಿ ಸಿಎಂ ಜತೆ ಮಾತನಾಡಿದರು. ವಿದ್ಯಾರ್ಥಿನಿ ಪ್ರತೀಕ್ಷಾ, ಶಿಕ್ಷಕಿ ವಿದ್ಯಾ ಮಂಜುಳಾ ಅವರೂ ಅಭಿಪ್ರಾಯ ವ್ಯಕ್ತಪಡಿಸಿದರು.