(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.12.ಈಗಿನ ಜೀವನ ಪದ್ದತಿ ತುಂಬಾ ಒತ್ತಡದಿಂದ ಕೂಡಿದ್ದು, ಅದು ಶಿರೀರ ಹಾಗೂ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮುಕ್ತರಾಗಲು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು.
ಬಾಲ್ಯದಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಮೌಲ್ಯಯುತ ಜೀವನ ನಡೆಸಬಹುದು ಎಂದು ಕಡಬದ ಯುವ ಉದ್ಯಮಿ ಶ್ರೀ ಮೋಹಾನ್ ದಾಸ್ ತಿಳಿಸಿದರು. ಅವರು ಸರಸ್ವತೀ ಪದವಿಪೂರ್ವ ವಿದ್ಯಾಲಯ ಇಲ್ಲಿ ಸ್ಪಂದನ ಸಾಹಿತ್ಯ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ದಂತ ವೈದ್ಯ ಜೇಸಿ ಡಾ. ರಾಮ್‍ಪ್ರಕಾಶ್ ಮಾತನಾಡಿ, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ಇತಿಹಾಸ ವಿಷಯಗಳ ಅಧ್ಯಯನದಿಂದ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಸಮಾಜದ ಒಳಿತು ಕೆಡುಕುಗಳ ಬಗ್ಗೆ ತಿಳಿದು ಯೋಗ್ಯ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುವುದು ಎಂದರು.
ಆಡಳಿತ ಮಂಡಳಿಯ ನಿರ್ದೇಶಕ ಶ್ರೀ ಶಿವಪ್ರಸಾದ್ ಮೈಲೇರಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಶ್ರೀ ವೆಂಕಟ್ರಮಣ ರಾವ್ ಮಂಕುಡೆ ಕೋಶ ಓದಿ ನೋಡು ದೇಶ ಸುತ್ತಿ ನೋಡು ಎಂಬ ಮಾತಿನಂತೆ ಪಠ್ಯಪುಸ್ತಕದ ಜ್ಞಾನ ಸೀಮಿತವಾದದ್ದು ಅದು ಕಲಿಕೆಯ ಒಂದು ಭಾಗ ಮಾತ್ರ. ಜೀವನದ ಪಾಠಕ್ಕೆ ಗ್ರಂಥಾಧ್ಯಯನ ಅಗತ್ಯ ಎಂದರು. ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಪ್ರಸ್ತಾವಣೆಯ ಮೂಲಕ ಸ್ವಾಗತಿಸಿ ಉಪನ್ಯಾಸಕ ನಾಗರಾಜ್ ವಂದಿಸಿ, ವಿದ್ಯಾರ್ಥಿನಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.