(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.11.ರಾಜ್ಯದಲ್ಲಿ ಮುಂಗಾರು ವೇಳೆ ಕಡಲ್ಕೊರೆತ ಸೇರಿದಂತೆ ಭೂಕುಸಿತ, ಕೃತಕ ನೆರೆಯನ್ನು ನಿಭಾಯಿಸಲು ಈಗಾಗಲೇ ಜಿಲ್ಲಾಡಳಿತ ಸಜ್ಜಾಗಿದ್ದು, ಎನ್ ಎಂಪಿಟಿಯಲ್ಲಿ ಎನ್ ಡಿ ಆರ್ ಎಫ್ ಪಡೆ ಈಗಾಗಲೇ ಆಗಮಿಸಿದೆ.
ಪ್ರಾಕೃತಿಕ ವಿಕೋಪ ತಡೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಹೇಳಿದರು. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಮುಂಗಾರಿನ ಸವಾಲುಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಬಂದರು ಮತ್ತು ಮೀನುಗಾರಿಕಾ ಅಧಿಕಾರಿಗಳಲ್ಲಿ ಕಡಲ್ಕೊರೆತ ತಡೆಗೆ ಮುನ್ನಚ್ಚರಿಕೆ ವಹಿಸಲು ನಿರ್ದೇಶನ ನೀಡಿದರು.
ಪ್ರಾಕೃತಿಕ ವಿಕೋಪ ವೇಳೆ ಹೋಮ್‍ಗಾರ್ಡ್‍ಗಳ ಸದ್ಬಳಕೆ ಬಗ್ಗೆ ಅವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಬಗ್ಗೆ ಸಲಹೆ ಮಾಡಿದರು. ಜಿಲ್ಲೆಯಲ್ಲಿ ಜೀವರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಯಾವ ರೀತಿ ನೆರವು ನೀಡಬಹುದೆಂಬ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು. ಭೂಕುಸಿತ, ನೆರೆ ಸಂದರ್ಭ ಎನ್ ಡಿ ಆರ್ ಎಫ್ ಬಳಕೆ ಬಗ್ಗೆ ಸವಿವರ ಚರ್ಚೆ ನಡೆಯಿತು. ಅರಣ್ಯ ಇಲಾಖೆ ಮರಗಳ ತೆರವಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.