(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.11.ನೆರೆ ರಾಜ್ಯ ಕೇರಳದಲ್ಲಿ ನೀಫಾ ವೈರಾಣು ಜ್ವರ ಪತ್ತೆಯಾಗಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರಲ್ಲಿ ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಕ್ರಮಕೈಗೊಳ್ಳಿ.
ಹಣ್ಣು ಹಂಪಲು ಮಾರಾಟಗಾರರ ಸಭೆ ಕರೆದು ಅವರಲ್ಲೂ ಉತ್ತಮ ಗುಣಮಟ್ಟದ ಹಣ್ಣು ಹಂಪಲು ಮಾರಾಟ ಮಾಡಲು ನಿರ್ದೇಶನ ನೀಡಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಸೂಚಿಸಿದರು.ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಹಣ್ಣುಗಳನ್ನು ಸೇವಿಸುವ ಮುನ್ನ ಎಚ್ಚರವಹಿಸಿ. ಮಾರುಕಟ್ಟೆಯಿಂದ ತಂದಿರುವಂತಹ ಹಣ್ಣುಗಳನ್ನು ನೇರವಾಗಿ ಸೇವಿಸದೆ ನೀರಿನಿಂದ ಶುಚಿಗೊಳಿಸಿದ ನಂತರವೇ ಸೇವಿಸಿಬೇಕು.
ಪ್ರಾಣಿ, ಪಕ್ಷಿಗಳಿಂದ ವೈರಸ್ ನೀಫಾ ವೈರಸ್ ಹರಡುವುದರಿಂದ ಎಚ್ಚರ ವಹಿಸಿಕೊಳ್ಳಬೇಕು. ಹಣ್ಣು ಹಂಪಲು ಅಂಗಡಿಗಳಲ್ಲಿ ಹಣ್ಣುಗಳ ಜೊತೆಗೆ ನೀಫಾ ವೈರಸ್ ಕುರಿತ ಭಿತ್ತಿಚಿತ್ರವನ್ನು ನೀಡಿ ಜನತೆಗೆ ಜ್ವರದ ಬಗ್ಗೆ ಮಾಹಿತಿ ನೀಡಿ ಹಾಗೂ ಶಾಲಾ- ಕಾಲೇಜುಗಳಲ್ಲಿ ವೈರಸ್ ಹರಡುವ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕು. ತಾಲೂಕು ಮಟ್ಟದ ಲ್ಯಾಬ್‍ಗಳಲ್ಲಿ ಸಿಬ್ಬಂದಿ ಕೊರತೆ ಇದ್ದಲ್ಲಿ ಅದಷ್ಟೂ ಬೇಗನೆ ಭರ್ತಿ ಮಾಡಿ ಜನರು ಕಾಯಿಲೆಯ ಬಗ್ಗೆ ಭೀತರಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ನೀರನ್ನು ಸಂಗ್ರಹಿಸಿಡಬಾರದು. ಜ್ವರ ಪ್ರಕರಣ ವರದಿಯಾದರೆ ಹಂದಿ, ಕುದುರೆ, ನಾಯಿ ಮತ್ತು ಬೆಕ್ಕು ಇನ್ನಿತರ ಪ್ರಾಣಿಗಳಿಂದ ದೂರವಿರಬೇಕು. ಸಾಮಾನ್ಯ ಜ್ವರ ಬಂದ ತಕ್ಷಣ ನಿರ್ಲಕ್ಷ್ಯ ಮಾಡದೇ ಮನೆ ಮದ್ದು ಸೇವಿಸದೆ ಸೂಕ್ತ ಸಮಯದಲ್ಲಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ. ಸೋಂಕು ದೃಢಪಟ್ಟರೆ, ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಗ್ಲೌಸ್ ಬಳಸಿ ಎಂದರು.ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಅವರು ಮಾತನಾಡಿ, ನೀಫಾ ಜ್ವರ ಪತ್ತೆಯಾದರೆ ಇಲಾಖೆಗೆ ಈಗಾಗಲೇ ಬಂದಿರುವ ನಿರ್ದೇಶನದಂತೆ ರೆಸ್ಪಾನ್ಸ್ ಪ್ರೊಟೊಕಾಲ್ ಅನುಸರಿಸಿ ಎಂದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ ಆರ್ ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಡಿ ಎಚ್ ಒ ರಾಮಕೃಷ್ಣ ರಾವ್, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.