(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.8.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಪ್ರಸ್ತುತ ನೀರಿನ ಅಭಾವವಿರುವ ಹಿನ್ನಲೆಯಲ್ಲಿ ಪಡಿತರ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.
ಜೂನ್ 5 ರಂದು ಮಳೆಯಾಗಿರುವುದರಿಂದ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಪಡಿತರ ಪದ್ದತಿಯನ್ನು ಪರಿಷ್ಕರಿಸಲಾಗಿದ್ದು, ಅದರಂತೆ ಪ್ರಸ್ತುತ ಜೂನ್ 6 ರಿಂದ ಜೂನ್ 9 ರವರೆಗೆ ನೀರು ಪೂರೈಕೆ ಸ್ಥಗಿತಗೊಳಿಸುವುದನ್ನು ಪುನರ್ ಪರಿಶೀಲಿಸಿ, ಪರಿಷ್ಕರಿಸಿ ಜೂನ್ 8 ರಂದು ಪೂರ್ವಾಹ್ನ 6 ಗಂಟೆಯಿಂದ 12 ರಂದು ಪೂರ್ವಾಹ್ನ 6 ಗಂಟೆಯವರೆಗೆ 96 ಗಂಟೆಗಳ ಅವಧಿಯಲ್ಲಿ ನೀರು ಸರಬರಾಜು ಮಾಡಲಾಗುವುದು. ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಿಗೆ ಈ ಹಿಂದೆ ಪೂರೈಕೆ ಮಾಡಲಾಗುತಿತ್ತು.
ಅದೇ ರೀತಿಯಲ್ಲಿ (ವಾರ್ಡ್‍ವಾರು ದೈನಂದಿನ ಪೂರೈಕೆಯಂತೆ) ನೀರನ್ನು ಸರಬರಾಜು ಮಾಡಲು ಕ್ರಮವಹಿಸಲಾಗಿದೆ.ಸಾರ್ವಜನಿಕರು ತಮ್ಮ ಮನೆಗಳಲ್ಲಿನ ಕೈತೋಟಗಳಿಗೆ, ವಾಹನ ತೊಳೆಯಲು, ಇನ್ನಿತರ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸಬಾರದು ಹಾಗೂ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವಂತೆ ಮಹಾನಗರಪಾಲಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.